ADVERTISEMENT

ಹತ್ತು ಸಾವಿರ ಮನೆಗಳ ನಿರ್ಮಾಣ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 18:30 IST
Last Updated 4 ಅಕ್ಟೋಬರ್ 2011, 18:30 IST

ಬೆಂಗಳೂರು: ಯಲಹಂಕ, ಯಶವಂತಪುರ, ಆನೇಕಲ್, ದೇವನಹಳ್ಳಿ, ನೆಲಮಂಗಲ ಸೇರಿದಂತೆ ನಗರದ ಸುತ್ತಮುತ್ತ ಹತ್ತು ಸಾವಿರ ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಇಲ್ಲಿ ತಿಳಿಸಿದರು.

ಕರ್ನಾಟಕ ಗೃಹ ಮಂಡಳಿಯ ಪ್ರಗತಿ ಪರಿಶೀಲನೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಡಿಮೆ ವೆಚ್ಚದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದ್ದು, ಕಾಮಗಾರಿ ಆರಂಭವಾದ 18 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಸೂರ್ಯನಗರಕ್ಕೆ ಶಿಂಷಾದಿಂದ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು 100 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇನ್ನು ಮುಂದೆ ಗೃಹ ಮಂಡಳಿಯಿಂದ ನಿರ್ಮಿಸುವ ಬಡಾವಣೆಗಳಿಗೆ ಇಲಾಖೆಯಿಂದಲೇ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದರು.

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ತಾವರೆಕೆರೆ, ದೊಡ್ಡ ಆಲದಮರ, ಬಂಗಾರಪೇಟೆ, ಶ್ರೀನಿವಾಸಪುರ, ಗೂಳೂರು, ಕುಣಿಗಲ್, ಶಿರಾ ತಾಲ್ಲೂಕುಗಳಲ್ಲಿ ಬೇಡಿಕೆಯ ಸಮೀಕ್ಷೆ ಆರಂಭವಾಗಿದ್ದು, ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಬೇಡಿಕೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಲು, ನಿವೇಶನಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗುವುದು. ಶೇ 30ರಷ್ಟು ಮನೆಗಳನ್ನು ನಿರ್ಮಿಸುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ ಎಂದು ಸೋಮಣ್ಣ ಅವರು ಭರವಸೆ ನೀಡಿದರು.

ಬಡಾವಣೆ ನಿರ್ಮಾಣವಾದ ಮೇಲೆ 4-5 ವರ್ಷಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು. ಕೆಂಗೇರಿ, ಬಂಡೆಮಠ ಮತ್ತು ವಡಗೇರಿಯಲ್ಲಿ ಗುಂಪು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕಾರಣ ತಿಳಿಯಬೇಕು: `ನನ್ನ ಮೇಲೆ ನಡೆದ ಹಲ್ಲೆಗೆ ಕಾರಣ ಏನು? ಆತನ ಉದ್ದೇಶ ಏನು ಎಂಬುದನ್ನು ತಿಳಿಯುವ ಉದ್ದೇಶದಿಂದ ದೂರು ನೀಡಿದ್ದೇನೆ. ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಘಟನೆಯ ವೈಭವೀಕರಣಕ್ಕಿಂತ ಸತ್ಯ ಗೊತ್ತಾಗಬೇಕು ಎಂಬುದನ್ನು ಪೊಲೀಸರಿಗೆ ತಿಳಿಸಿದ್ದೇನೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.