ADVERTISEMENT

ಹಲಗೇವಡೇರಹಳ್ಳಿಯಲ್ಲಿ ಸ್ವಯಂ ತೆರವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:41 IST
Last Updated 17 ಆಗಸ್ಟ್ 2016, 19:41 IST
ಆರ್‌.ಆರ್‌.ನಗರದ ಹಲಗೇವಡೇರಹಳ್ಳಿಯಲ್ಲಿ ನಟರಾಜ್‌ ಅವರು ಕಟ್ಟಡವನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರು
ಆರ್‌.ಆರ್‌.ನಗರದ ಹಲಗೇವಡೇರಹಳ್ಳಿಯಲ್ಲಿ ನಟರಾಜ್‌ ಅವರು ಕಟ್ಟಡವನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರು   

ಬೆಂಗಳೂರು: ರಾಜರಾಜೇಶ್ವರಿ ನಗರದ ಹಲಗೇವಡೇರಹಳ್ಳಿಯಲ್ಲಿ ರಾಜಕಾಲುವೆ  ಮೇಲೆ ನಿರ್ಮಿಸಿದ್ದ ಮನೆಗಳನ್ನು ಮಾಲೀಕರೇ ತೆರವುಗೊಳಿಸುತ್ತಿದ್ದಾರೆ.

ಕಂದಾಯ ಇಲಾಖೆಯ ನಿವೃತ್ತ ಉಪ ತಹಸೀಲ್ದಾರ್‌ ನಟರಾಜ್‌ ಹಾಗೂ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಮಹಾಲಿಂಗೇಗೌಡ ಅವರ ಮನೆಗಳ  ಅರ್ಧ ಭಾಗ ಒತ್ತುವರಿಯಾಗಿದೆ.

ನಟರಾಜ್‌ ಮಾತನಾಡಿ, ‘1998ರಲ್ಲಿ ಕೃಪಾಕರ್‌ ಅವರಿಂದ 1,600 ಚದರ ಅಡಿ ಅಳತೆಯ ನಿವೇಶನವನ್ನು ಖರೀದಿಸಿದೆ. ಕ್ರಯಪತ್ರದಲ್ಲಿ ಚಾನಲ್‌, ಚರಂಡಿ ಎಂದು ಹೇಳಲಾಗಿದೆ. ರಾಜಕಾಲುವೆ ಎಂದು ಗೊತ್ತಿದ್ದರೆ ನಾವು ಖರೀದಿಸುತ್ತಿರಲಿಲ್ಲ. ನಿವೇಶನಕ್ಕೆ ಸಂಬಂಧಿಸಿದಂತೆ 1951ರಿಂದ ಈವರೆಗಿನ ದಾಖಲೆಗಳು ನನ್ನ ಬಳಿ ಇವೆ.  ಹೀಗಿದ್ದರೂ ಮನೆಯನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

‘2010ರಲ್ಲಿ 26 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿದೆ. ಇದಕ್ಕಾಗಿ ಮಾಡಿದ ಸಾಲ ಇನ್ನೂ ತೀರಿಸಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ಕಟ್ಟಿದ ಮನೆಯನ್ನು ಕೆಡವಲು ಮನಸ್ಸು ಬರುತ್ತಿಲ್ಲ’ ಎಂದು ನೋವು ತೋಡಿಕೊಂಡರು.

‘ಈಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ’ ಎಂದು ಹೇಳಿದರು.

‘ಅಧಿಕಾರಿಗಳು ಮನೆಗೆ ಗುರುತು ಹಾಕಿ ಹೋದರು. ಬಿಬಿಎಂಪಿ ವತಿಯಿಂದ ಕಟ್ಟಡ ತೆರವುಗೊಳಿಸಿದರೆ, ಅದಕ್ಕೆ ತಗಲುವ ವೆಚ್ಚದ ಮೂರು ಪಟ್ಟು ಹಣವನ್ನು ಪಾವತಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಜೆಸಿಬಿಗಳ ಆರ್ಭಟಕ್ಕೆ ಮನೆಯ ಉಳಿದ ಭಾಗಗಳು ಬಿರುಕು ಬಿಟ್ಟುಕೊಳ್ಳುತ್ತವೆ. ಹೀಗಾಗಿ ನಾವೇ ಕಟ್ಟಡವನ್ನು ತೆರವು ಮಾಡುತ್ತಿದ್ದೇವೆ. ಇದಕ್ಕಾಗಿ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ’ ಎಂದರು.

ಮಹಾಲಿಂಗೇಗೌಡ ಮಾತನಾಡಿ, ‘1996ರಲ್ಲಿ ನಿವೇಶನ ಖರೀದಿಸಿ 2002ರಲ್ಲಿ ಮನೆ ಕಟ್ಟಿಸಿದೆ. ಇದಕ್ಕಾಗಿ ₹ 50 ಲಕ್ಷ ಸಾಲ ಮಾಡಿದ್ದೆ. ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಮನೆಗೆ ಗುರುತು ಹಾಕಿ ಹೋದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಮನೆಯಲ್ಲಿ ಸಾಯಿ ವೃದ್ಧಾಶ್ರಮ ಇತ್ತು. 40 ಹಿರಿಯರು ಇಲ್ಲಿ ವಾಸವಾಗಿದ್ದರು. ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ’ ಎಂದರು.

‘ರಾಜಕಾಲುವೆಯ ಒತ್ತುವರಿ ತೆರವು ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ನಮ್ಮ ಮನೆ ಇರುವ ಜಾಗದಲ್ಲಿ ರಾಜಕಾಲುವೆ ಬಿಟ್ಟು 6 ಮೀಟರ್‌ ಜಾಗವನ್ನು ಗುರುತಿಸಲಾಗಿದೆ. ಆದರೆ, ಇದೇ ರಾಜಕಾಲುವೆ ಪದ್ಮಾವತಿ ಕಲ್ಯಾಣ ಮಂಟಪ ಹಾಗೂ ಮೀನಾಕ್ಷಿ ಕಲ್ಯಾಣ ಮಂಟಪದ ನಡುವೆ ಹಾದು ಹೋಗಿದ್ದು, ಅಲ್ಲಿ ರಾಜಕಾಲುವೆಯನ್ನು ಒಳಗೊಂಡಂತೆ 6 ಮೀಟರ್‌ ಜಾಗಕ್ಕೆ ಗುರುತು ಹಾಕಲಾಗಿದೆ’ ಎಂದು ಆರೋಪಿಸಿದರು.

ಸ್ಥಳೀಯ ನಿವಾಸಿ ಬೋರಯ್ಯ ಅವರು, ‘ಹಲಗೇವಡೇರಹಳ್ಳಿ ಕೆರೆಯಂಗಳದಲ್ಲಿ ಪ್ರಭಾವಿ ವ್ಯಕ್ತಿಗಳು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅದನ್ನು ತೆರವುಗೊಳಿಸಿಲ್ಲ’ ಎಂದು ದೂರಿದರು.

‘ರಾಜಕಾಲುವೆ ಮೇಲೆ ಆಸ್ಪತ್ರೆ ನಿರ್ಮಾಣ’
‘ಬಂಗಾರಪ್ಪ ಮುಖ್ಯರಸ್ತೆಯಲ್ಲಿರುವ ಎಸ್‌.ಎಸ್‌. (ಶಾಮನೂರು ಶಿವಶಂಕರಪ್ಪ) ಆಸ್ಪತ್ರೆಯನ್ನು ರಾಜಕಾಲುವೆಯ ಮೇಲೆ ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ’ ಎಂದು ಜೆಡಿಎಸ್‌ ಯುವ ಘಟಕದ ಕಾರ್ಯಾಧ್ಯಕ್ಷ ಬಿ.ಎಚ್‌. ಚಂದ್ರಶೇಖರ್‌ ಆರೋಪಿಸಿದರು.

‘ಬಂಗಾರಪ್ಪ ನಗರ ಗುಡ್ಡದ ಮೇಲಿದೆ.  ಈ ಭಾಗದಲ್ಲಿ ದೊಡ್ಡ ರಾಜಕಾಲುವೆ ಇತ್ತು. ಆದರೆ ಅದನ್ನು ಮುಚ್ಚಿ ಮನೆಗಳನ್ನು ನಿರ್ಮಿಸಲಾಗಿದೆ. ರಾಜಕಾಲುವೆ ಹಾದು ಹೋಗಿರುವ ಜಾಗದಲ್ಲಿ ಎಸ್‌.ಎಸ್‌. ಆಸ್ಪತ್ರೆಯನ್ನು ನಿರ್ಮಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿರುವ ನಕ್ಷೆಯಲ್ಲೂ ಇದು ಕಾಲುವೆ ಎಂದೇ ಗುರುತಿಸಲಾಗಿದೆ. ಅಲ್ಲದೆ, ಚಿತ್ರ ನಟ ದರ್ಶನ್‌ ಅವರ ಮನೆಯೂ ರಾಜಕಾಲುವೆಯ ಮೇಲೆ ನಿರ್ಮಾಣಗೊಂಡಿದೆ’ ಎಂದು ಆರೋಪಿಸಿದರು.

‘ಈ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಬಡವರ ಮನೆಗಳನ್ನು ಮಾತ್ರ ರಾಜಾರೋಷವಾಗಿ ಒಡೆದು ಹಾಕುತ್ತಿದ್ದಾರೆ’ ಎಂದು ಅಧಿಕಾರಿಗಳ ವಿರುದ್ಧ ದೂರಿದರು.

ಮುಖ್ಯಾಂಶಗಳು
* ಪಾಲಿಕೆಯಿಂದ ಭಾರಿ ಶುಲ್ಕ, ಕಟ್ಟಡದ ಉಳಿದ ಭಾಗಕ್ಕೆ ಹಾನಿಯ ಭೀತಿ
* ತಮ್ಮ ಖರ್ಚಿನಲ್ಲೇ ತೆರವಿಗೆ ಮುಂದಾದ ಸ್ಥಳೀಯರು
* ವೃದ್ದಾಶ್ರಮ ಸ್ಥಳಾಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT