ADVERTISEMENT

ಹಲ್ಲೆ: ಪಾಪ್ ಗಾಯಕ ದೂರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 18:30 IST
Last Updated 3 ಅಕ್ಟೋಬರ್ 2012, 18:30 IST

ಬೆಂಗಳೂರು: `ಹಳೆ ವಿಮಾನ ನಿಲ್ದಾಣ ಸಂಚಾರ ಠಾಣೆ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾಶಾ ಸಾಂಬಾ ಎಂಬ ಪಾಪ್ ಗಾಯಕರೊಬ್ಬರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

`ನಾನು ಪತ್ನಿ ಟೀಟಾ ಸಾಂಬಾ ಜತೆ ಸೆ.30ರ ಮಧ್ಯರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದೆ. ಆಗ, ಪಾನಮತ್ತ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದ ಪೊಲೀಸರು ನಮ್ಮ ವಾಹನವನ್ನು ಅಡ್ಡಗಟ್ಟಿದರು. ಪತ್ನಿ ವಾಹನ ಚಾಲನೆ ಮಾಡುತ್ತಿದ್ದು, ನಾನು ಪಕ್ಕದ ಸೀಟಿನಲ್ಲಿ ಕುಳಿತಿದ್ದೆ. ಪತ್ನಿಯನ್ನು ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿದರು~ ಎಂದು ಸಾಶಾ ಸಾಂಬ ಆರೋಪಿಸಿದ್ದಾರೆ.

`ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡ ನಾನು, ವಾಹನದಿಂದ ಕೆಳಗಿಳಿದೆ. ಆಗ ಏಳೆಂಟು ಮಂದಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದರು. ನಂತರ ಕಾರಿನ ಕೀ ತೆಗೆದುಕೊಂಡು ನನ್ನನ್ನು ಆಟೊದಲ್ಲಿ ಠಾಣೆಗೆ ಕರೆದೊಯ್ದರು. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ. 20 ನಿಮಿಷದಲ್ಲಿ ಠಾಣೆಗೆ ಬಂದ ಸ್ನೇಹಿತರು, ಕರ್ತವ್ಯದಲ್ಲಿದ್ದ ಎಸ್‌ಐ ಅವರೊಂದಿಗೆ ಚರ್ಚಿಸಿದರು. ಎಸ್‌ಐ ಕಾರಿನ ಕೀ ಕೊಟ್ಟು ನಮ್ಮನ್ನು ಕಳುಹಿಸಿದರು. ಈ ಸಂದರ್ಭದಲ್ಲಿ ನಾನಾಗಲೀ, ಪತ್ನಿಯಾಗಲೀ ಮದ್ಯ ಕುಡಿದಿರಲಿಲ್ಲ~ ಎಂದು ಸಾಂಬಾ ಹೇಳಿದ್ದಾರೆ.

ಸಾಂಬಾ ಅವರು ಘಟನೆಯ ವಿವರಗಳನ್ನು ಸಾಮಾಜಿಕ ಜಾಲಾ ತಾಣಗಳಲ್ಲಿ ಪ್ರಕಟಿಸಿದ್ದು, ಪೊಲೀಸರ ವರ್ತನೆಗೆ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ವಾಸ್ತವತೆ ಏನೆಂಬುದನ್ನು ತಿಳಿದು, ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಾಂಬಾ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.