ADVERTISEMENT

ಹಲ್ಲೆ: ಮಹಿಳಾ ಐಪಿಎಸ್ ಅಧಿಕಾರಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಬೆಂಗಳೂರು: ತಮ್ಮ ವರ್ಗಾವಣೆ ಆದೇಶ ಪತ್ರವನ್ನು ಮನೆಗೆ ತಂದ ಕೆಳ ಹಂತದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಡಿಐಜಿ ದರ್ಜೆಯ ಮಹಿಳಾ ಐಪಿಎಸ್ ಅಧಿಕಾರಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
`ಕೇಂದ್ರ ಗುಪ್ತಚರ ಇಲಾಖೆಯ (ಐಬಿ) ಉಪ ನಿರ್ದೇಶಕಿ ಎನ್.ಬಿ.ಭಾರತಿ ಅವರ ವಿರುದ್ಧ ಆಚಾರ್ ಎಂಬುವವರು ದೂರು ಕೊಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

`ಭಾರತಿ ಅವರು ಈ ಹಿಂದೆ ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ಒಡಿಶಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರಿಗೆ ಕರ್ನಾಟಕಕ್ಕೆ ವರ್ಗಾವಣೆಯಾಗಿತ್ತು. ನ.27ರಂದು ಪುನಃ ಅವರನ್ನು ಒಡಿಶಾಗೆ ವರ್ಗಾಯಿಸಲಾಯಿತು. ಆದರೆ, ಅವರು ವರ್ಗಾವಣೆ ಪತ್ರವನ್ನು ಪಡೆದಿರಲಿಲ್ಲ. ಹೀಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಗಾವಣೆ ಪತ್ರ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಅವರಿಗೆ ತಲುಪಿಸಲು ಸೂಚಿಸಿದ್ದರು' ಎಂದು ಆಚಾರ್ ದೂರಿನಲ್ಲಿ ತಿಳಿಸಿದ್ದಾರೆ.

`ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ ನಾನು ಮತ್ತು ಜನಾರ್ಧನ್ ಎಂಬುವರ ವರ್ಗಾವಣೆ ಪತ್ರವನ್ನು ಕೊಡಲು ಎಚ್‌ಎಂಟಿ ಲೇಔಟ್‌ನಲ್ಲಿರುವ ಅವರ ಮನೆಗೆ ಹೋಗಿದ್ದೆವು.ಈ ವೇಳೆ ಭಾರತಿ ಅವರು ತಮ್ಮ ಅಂಗರಕ್ಷಕರ ಮೂಲಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ   ಮೊಬೈಲ್‌ಗಳನ್ನು ಸಹ ಕಸಿದುಕೊಂಡರು.

ಅಲ್ಲದೇ, ನಾವು ಅನಧಿಕೃತವಾಗಿ ಅವರ ಮನೆಗೆ ಪ್ರವೇಶ ಮಾಡಲು ಯತ್ನಿಸಿದೆವು ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದರು' ಎಂದು ಆಚಾರ್ ದೂರಿದ್ದಾರೆ.`ಘಟನೆ ಬಗ್ಗೆ ಗುಪ್ತಚರ ದಳದ ಪ್ರಧಾನ ಕಚೇರಿಗೆ ಮತ್ತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಭಾರತಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಲಾಗುವುದು' ಎಂದು ಗುಪ್ತಚರ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.