ADVERTISEMENT

ಹಳಿಯಲ್ಲಿ ನಿತ್ಯ ಅಪಾಯದ ಪಯಣ

ಕಾಡುಗೋಡಿ: ಪಾದಚಾರಿ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಮಹದೇವಪುರ: ಇಲ್ಲಿನ ಕಾಡುಗೋಡಿಯಲ್ಲಿರುವ ರೈಲು ನಿಲ್ದಾಣದ ಬಳಿ ಸಾರ್ವಜನಿಕರು ಓ ಫಾರಂ ಕಡೆಗೆ ಹೋಗಲು ನೆರವಾಗಲು ಹಳಿಗಳಿಗೆ ಅಡ್ಡಲಾಗಿ ನಿರ್ಮಾಣವಾಗಬೇಕಿದ್ದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಇದರಿಂದಾಗಿ ನಿತ್ಯವೂ ಜನರು ಸದಾ ಅಪಾಯದಲ್ಲೇ ಅತ್ತಿಂದಿತ್ತ ಹಳಿಗಳನ್ನು ದಾಟಿಕೊಂಡು ಓಡಾಡುವಂತಾಗಿದೆ.
ಈ ರೈಲು ನಿಲ್ದಾಣದಲ್ಲಿ ಅಧಿಕ ಸಂಖ್ಯೆಯ ರೈಲುಗಳು ಸಂಚರಿಸುತ್ತಿವೆ. ಕಾಡುಗೋಡಿ, ಬೆಳತೂರು ಗ್ರಾಮದ ಜನತೆ ಓ ಫಾರಂ ಹಾಗೂ ಸರ್ಜಾಪುರ, ಬೆಂಗಳೂರು ನಗರದ ಕಡೆಗೆ ಹೋಗಬೇಕೆಂದರೆ ರೈಲು ಹಳಿಗಳನ್ನು ದಾಟಿಕೊಂಡು ಹೋಗಬೇಕು.

ಕೆಲ ತಿಂಗಳುಗಳ ಹಿಂದೆ ಕಾಡುಗೋಡಿಯ ನಿವಾಸಿಗಳಿಬ್ಬರು ಹಳಿಗಳನ್ನು ದಾಟಿಕೊಂಡು ಹೋಗುವ ವೇಳೆ ರೈಲಿಗೆ ಸಿಲುಕಿ ಮೃತಪಟ್ಟರು. ಆ ಸಂದರ್ಭದಲ್ಲಿ ಸ್ಥಳೀಯರು ರೈಲು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆಗ ರೈಲ್ವೆ ಇಲಾಖೆಯು ಆದಷ್ಟು ಬೇಗನೆ ಮೇಲ್ಸೇತುವೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಮೇಲ್ಸೇತುವೆ ನಿರ್ಮಾಣಗೊಂಡಿಲ್ಲ.

`ಕಾಡುಗೋಡಿ ಬಸ್ ನಿಲ್ದಾಣವೂ ರೈಲ್ವೆ ನಿಲ್ದಾಣದ ಪಕ್ಕದಲ್ಲಿದೆ. ಈ ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಜನರು ಹಳಿಗಳನ್ನು ದಾಟಿಕೊಂಡು ಸಾಗಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಹ ಹಳಿಗಳನ್ನು ದಾಟಿಕೊಂಡೇ ಹೋಗುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಹಳಿಗಳ ಅಕ್ಕಪಕ್ಕ ದೀಪದ ಕೊರತೆ ಇರುವುದರಿಂದ ಜನತೆಗೆ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಸ್ಥಳೀಯರು ಅಳಲು ತೋಡಿಕೊಂಡರು.

`ಏಪ್ರಿಲ್ ತಿಂಗಳಿನಲ್ಲಿಯೇ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಜೂನ್ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿಲ್ಲ' ಎಂದು ಸ್ಥಳೀಯ ಜಾನಕಿರಾಮ್ ಆಕ್ರೋಶ ವ್ಯಕ್ತಪಡಿಸಿದರು.

`ಬಸ್, ಲಾರಿಗಳು ಸೇರಿದಂತೆ ದೊಡ್ಡ ವಾಹನಗಳ ಓಡಾಟಕ್ಕೆ ಸುಮಾರು ಮುಕ್ಕಾಲು ಕಿ.ಮೀ. ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಆ ಸೇತುವೆಯ ಮೂಲಕ ಕಾಡುಗೋಡಿಯ ನಿವಾಸಿಗಳು ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಸುಮಾರು ಒಂದೂವರೆ ಕಿ.ಮೀ. ದೂರವನ್ನು ಕ್ರಮಿಸಬೇಕಾಗುತ್ತದೆ. ಹಳಿಗಳನ್ನು ದಾಟಿ ಹೋದರೆ ಬಸ್ ನಿಲ್ದಾಣಕ್ಕೆ 100 ಮೀಟರ್ ಮಾತ್ರ ದೂರ. ಹೀಗಾಗಿ ಸ್ಥಳೀಯರು ಹಳಿಗಳನ್ನು ದಾಟಿಕೊಂಡು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು' ಎಂದು ಸ್ಥಳೀಯರು ಒತ್ತಾಯಿಸಿದರು.

`ವಿವಿಧ ಕಾರಣಗಳಿಂದಾಗಿ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು' ಎಂದು ರೈಲ್ವೆ ಇಲಾಖೆಯ ಅಧಿಕಾರಿ ಸಂದೀಪ್ ಮೆಹ್ರಾ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.