ADVERTISEMENT

‘ಹಳೆಯ ಆದೇಶ ಪ್ರಕಾರವೇ ನೀರು– ಯುಜಿಡಿ ಸಂಪರ್ಕ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 20:01 IST
Last Updated 13 ಡಿಸೆಂಬರ್ 2017, 20:01 IST
‘ಹಳೆಯ ಆದೇಶ ಪ್ರಕಾರವೇ ನೀರು– ಯುಜಿಡಿ ಸಂಪರ್ಕ’
‘ಹಳೆಯ ಆದೇಶ ಪ್ರಕಾರವೇ ನೀರು– ಯುಜಿಡಿ ಸಂಪರ್ಕ’   

ಬೆಂಗಳೂರು: ‘ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಾಗ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ(ಒ.ಸಿ) ಕೇಳುವುದು ಈ ಹಿಂದಿನ ನಿಯಮದಂತೆಯೇ ಮುಂದುವರಿಯಲಿದೆ. ಇದರಲ್ಲಿ ತಕ್ಷಣಕ್ಕೆ ಹೊಸ ಮಾರ್ಪಾಡು ಇಲ್ಲ’ ಎಂದು ಜಲಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಬಿಬಿಎಂಪಿ ಯಾವ ಮಾದರಿಯ ಕಟ್ಟಡಗಳಿಗೆ ಒ.ಸಿ ಕಡ್ಡಾಯಗೊಳಿಸಿದೆಯೋ ಅಂತಹ ಕಟ್ಟಡಗಳಿಂದ ಮಾತ್ರ ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಾಗ ಈ ಪ್ರಮಾಣಪತ್ರ ಕೇಳಲಾಗುವುದು. ಈಗಿನ ಆದೇಶ ಮಾರ್ಪಡಿಸಿ, ಬುಧವಾರವೇ ಹೊಸ ಆದೇಶ ಹೊರಡಿಸಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್‌, ಮಂಗಳವಾರ ನಡೆದ ಬಿಬಿಎಂಪಿ ಮುಂದುವರಿದ ವಿಶೇಷ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.

‘ಕೆಎಂಸಿ ಕಾಯ್ದೆ 1976 ಪ್ರಕಾರ, ಒಂದು ಮಹಡಿಗಿಂತ ಹೆಚ್ಚಿಗೆ ಇರುವ ಕಟ್ಟಡಗಳು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಬೇಕು. ಆದರೆ, ವಸತಿ ಕಟ್ಟಡ ಎಷ್ಟೇ ಮಹಡಿ ಹೊಂದಿದ್ದರೂ 5 ಅಡುಗೆ ಕೋಣೆಗಳಿಗಿಂತ ಮೇಲ್ಪಟ್ಟಿದ್ದರೆ ಅಥವಾ ಐದಕ್ಕಿಂತ ಹೆಚ್ಚು ಅಡುಗೆ ಕೋಣೆಗಳು ಒಂದೇ ಮಹಡಿಯಲ್ಲಿ ಇದ್ದರೂ ಒ.ಸಿ ಪಡೆಯುವುದು ಕಡ್ಡಾಯ. ಹಾಗೆಯೇ ವಾಣಿಜ್ಯ ಕಟ್ಟಡ 300 ಚದರ ಮೀಟರ್‌ಗಿಂತ ಹೆಚ್ಚಿದ್ದರೆ ಈ ಪ್ರಮಾಣಪತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧ್ಯಕ್ಷರು, ಈಗಿನ ಆದೇಶ ಪರಿಷ್ಕರಿಸಲು ಪಾಲಿಕೆ ವಿಶೇಷ ಸಭೆಯಲ್ಲಿ ಸಮ್ಮತಿಸಿದ್ದರು.

ADVERTISEMENT

'ಯಾವ ಕಟ್ಟಡಗಳಿಗೆ ಒ.ಸಿ ಕೇಳಬೇಕೆಂಬುದು ಆದೇಶದಲ್ಲೇ ಇದೆ. ಇದರಲ್ಲಿ ಯಾವ ಗೊಂದಲವೂ ಇಲ್ಲ. ಆದರೆ, ಈ ಆದೇಶವನ್ನು ಮಾರ್ಪಡಿಸಬೇಕಾದರೆ ಮಂಡಳಿಯ ಇತರ ಸದಸ್ಯರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಬೇಕು. ಆದೇಶ ತಿದ್ದುಪಡಿಗೂ ಸರ್ಕಾರದ ಒಪ್ಪಿಗೆಗೆ ಪ್ರಸ್ತಾವ ಕಳುಹಿಸಬೇಕು. ಗೆಜೆಟ್‌ನಲ್ಲಿ ಪ್ರಕಟವಾಗದೆ ಆದೇಶ ಬದಲಿಸುವಂತಿಲ್ಲ. ಹಾಗಾಗಿ ಈ ಹಿಂದಿನ ಆದೇಶವನ್ನೇ ಪಾಲಿಸಬೇಕಾಗಿದೆ’ ಎಂದು ಜಲಮಂಡಳಿ (ನಿರ್ವಹಣೆ) ಮುಖ್ಯ ಎಂಜಿನಿಯರ್‌ ರವೀಂದ್ರ ಸ್ಪಷ್ಟಪಡಿಸಿದ್ದಾರೆ.

ಪಾಲಿಕೆ ಸದಸ್ಯರು, ನೀರು ಮತ್ತು ಒಳಚರಂಡಿ ಸಂಪರ್ಕ ನೀಡಲು ಜಲಮಂಡಳಿ ಎಲ್ಲ ಕಟ್ಟಡಗಳಿಗೆ ಈ ಪ್ರಮಾಣಪತ್ರ ಕಡ್ಡಾಯಗೊಳಿಸಿರುವ ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.