ADVERTISEMENT

ಹಸಿರಿನ ಪರಿಭಾಷೆಯಲ್ಲಿ ಕುವೆಂಪು ದಾರ್ಶನಿಕತೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 18:50 IST
Last Updated 14 ಜನವರಿ 2012, 18:50 IST

ಬೆಂಗಳೂರು: `ಕುವೆಂಪು ಅವರ ದಾರ್ಶನಿಕತೆಯನ್ನು ಹಸಿರಿನ ಪರಿಭಾಷೆಯಲ್ಲಿ ಹೇಳುವ ಪ್ರಯತ್ನ ಕವಿಶೈಲದ ಕವಿತೆಗಳು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು. ನಗರದಲ್ಲಿ ಇತ್ತೀಚೆಗೆ ನಡೆದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, `ಹಸಿರಿನ ಪರಿಭಾಷೆಯನ್ನು ಸಮರ್ಥವಾಗಿ ಬಳಸಿರುವ ಕವಿ ಬೇಲೂರು ರಘುನಂದನ್ ಅವರ ಎಲ್ಲ ಕವಿತೆಗಳಲ್ಲೂ ಕುವೆಂಪು ಚಿತ್ರಣ ಹಾಗೂ ಹಸಿರು ಮೈವೆತ್ತಿದೆ~ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್, `ಕುವೆಂಪು ಅವರನ್ನು ಒಂದು ಪರಿಮಿತಿಯೊಳಗೆ ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಸಂಕಲನದ ವಸ್ತುವಿನಲ್ಲಿ ಮಹತ್ವವಿದೆ. ಕುವೆಂಪು ಅವರ ಬಗ್ಗೆ ಕವಿ ಸೃಷ್ಟಿಸಿರುವ ಉಪಮೆಗಳು ಹೊಸದಾಗಿವೆ. ಕಾವ್ಯದ ಭಾಷೆಗೆ ಕವಿ ಇನ್ನಷ್ಟು ಶ್ರಮ ಪಡಬೇಕು~ ಎಂದರು.

ಹಿರಿಯ ವರ್ಣಚಿತ್ರ ಕಲಾವಿದ ಎಂ.ಬಿ.ಪಾಟೀಲ್ ಮಾತನಾಡಿ, `ಕವಿ ಮತ್ತು ಕಲಾವಿದನ ಸಂಯೋಜನೆ ಕವಿಶೈಲದಲ್ಲಿ ಅಪೂರ್ವವಾಗಿ ಮೂಡಿಬಂದಿದೆ. ಕುವೆಂಪು ಹಾಗೂ ಕೆ.ಟಿ.ಶಿವಪ್ರಸಾದ್ ಕವಿಶೈಲದಲ್ಲಿ ಸಂಯೋಜನೆಗೊಂಡಂತೆ ಬೇಲೂರು ರಘುನಂದನ್ ಹಾಗೂ ಮುನಿಯಪ್ಪ ಸಂಕಲನದ ಮೂಲಕ ಎರಡು ಕಲೆಗಳ ಸಂಯೋಜನೆಯನ್ನು ಉತ್ತಮವಾಗಿ ಸಾಧಿಸಿದ್ದಾರೆ~ ಎಂದು ನುಡಿದರು.

ಕುವೆಂಪು ಕವಿತೆಗಳ ಗೀತ ಗಾಯನ ಹಾಗೂ ವರ್ಣಚಿತ್ರ ಕಲಾವಿದ ಮುನಿಯಪ್ಪ ಅವರ ಚಿತ್ರಗಳ ಪ್ರದರ್ಶನ ನಡೆಯಿತು. ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ, ಸಾಹಿತಿ ಡಾ.ಮಳಲಿ ವಸಂತಕುಮಾರ್, ಸಂಕಲನದ ಕರ್ತೃ ಬೇಲೂರು ರಘುನಂದನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.