ADVERTISEMENT

ಹಸಿರ ನಡುವೆ ಬಾಲ ವಿಜ್ಞಾನಿಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:05 IST
Last Updated 21 ಏಪ್ರಿಲ್ 2018, 20:05 IST
ನಗರದಲ್ಲಿ ಶನಿವಾರ 'ಐಎಸ್‌ಪಿಎಫ್‌' ಹಾಗೂ 'ಥಿಂಕ್‌ಟ್ಯಾಕ್‌' ಜಂಟಿಯಾಗಿ ಮಲ್ಲೇಶ್ವರದಲ್ಲಿರುವ ಸಿ.ವಿ.ರಾಮನ್‌ ಅವರ ನಿವಾಸ ಪಂಚವಟಿಯಲ್ಲಿ ಆಯೋಜಿಸಿದ್ದ "ವಿಜ್ಞಾನ ಓಪನ್‌ ಡೇ" ಕಾರ್ಯಕ್ರಮದಲ್ಲಿ ಲಿಪ್ ಬಾಮ್ ತಯಾರಿಕೆಯಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ 'ಐಎಸ್‌ಪಿಎಫ್‌' ಹಾಗೂ 'ಥಿಂಕ್‌ಟ್ಯಾಕ್‌' ಜಂಟಿಯಾಗಿ ಮಲ್ಲೇಶ್ವರದಲ್ಲಿರುವ ಸಿ.ವಿ.ರಾಮನ್‌ ಅವರ ನಿವಾಸ ಪಂಚವಟಿಯಲ್ಲಿ ಆಯೋಜಿಸಿದ್ದ "ವಿಜ್ಞಾನ ಓಪನ್‌ ಡೇ" ಕಾರ್ಯಕ್ರಮದಲ್ಲಿ ಲಿಪ್ ಬಾಮ್ ತಯಾರಿಕೆಯಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸುತ್ತ ಹಸಿರ ಛಾಯೆ. ನಡುವೆ ಕಂಗಳನ್ನು ಅರಳಿಸಿ ತದೇಕಚಿತ್ತದಿಂದ ನೋಡುತ್ತಿದ್ದ ಮಕ್ಕಳ ಪುಟಾಣಿ ಕೈಗಳು ಸ್ಟೆತೊಸ್ಕೋಪ್‌ ತಯಾರಿಸುವ ಭರದಲ್ಲಿದ್ದವು. ಇನ್ನೊಂದಿಷ್ಟು ಮಂದಿಗೆ ಲಿಪ್‌ಬಾಮ್‌ ಮಾಡುವ ತವಕ. ಮಕ್ಕಳಷ್ಟೇ ಅಲ್ಲ, ತಂದೆ ತಾಯಿ ಯರದ್ದೂ ಬೆರಗು ನೋಟ.

ಮಲ್ಲೇಶ್ವರದಲ್ಲಿರುವ ಸಿವಿ ರಾಮನ್‌ ಅವರ ಮನೆ ಪಂಚವಟಿಯಲ್ಲಿ ಶನಿವಾರ ನಡೆದ ‘ವಿಜ್ಞಾನ ಓಪನ್‌ ಡೇ’ ಇಂಥ ಹತ್ತಾರು ಭಾವನೆಗಳಿಗೆ ಸಾಕ್ಷಿಯಾಯಿತು.

ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸುವುದು ಹಾಗೂ ಪ್ರಾಯೋಗಿಕ ನೆಲೆಯಲ್ಲಿ ವಿಜ್ಞಾನ ವಿಷಯವನ್ನು ಅರ್ಥೈಸುವ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಐಸಿಪಿಎಫ್‌ ಹಾಗೂ ಥಿಂಕ್‌ಟ್ಯಾಕ್‌ ಆಯೋ
ಜಿಸಿತ್ತು.

ADVERTISEMENT

ಪಾರದರ್ಶಕ ಪೈಪ್‌, ಪ್ಲಾಸ್ಟಿಕ್‌ ಬಾಲ್‌, ಬಲೂನ್‌ ಹೀಗೆ ಹರಡಿ ಕೊಂಡಿದ್ದ ಹತ್ತಾರು ಉಪಕರಣಗಳನ್ನು ಜೋಡಿಸುತ್ತಾ ಸ್ಟೆತೊಸ್ಕೋಪ್‌ ಮಾಡು ತ್ತಿದ್ದರೆ ಪಕ್ಕದಲ್ಲಿದ್ದ ಟೇಬಲ್‌ನಲ್ಲಿ ಸ್ಟ್ರಾ ಹಿಡಿದು ‘ಪೀಪಿ’ ಊದುತ್ತಿದ್ದ ಮಕ್ಕಳು ಕಣ್ಣಿಗೆ ಬಿದ್ದರು.

ಅಲ್ಲೇ ನಿಂತಿದ್ದ ತರಬೇತುದಾರ್ತಿ ಸ್ಟ್ರಾವನ್ನು ‘ವಿ’ ಆಕಾರದಲ್ಲಿ ಕತ್ತರಿಸು ವಂತೆ ಹೇಳಿಕೊಟ್ಟರು. ನಂತರ ಬಾಯಲ್ಲಿ ಊದುವಂತೆ ತಿಳಿಸಿದರು.

ಮತ್ತೊಮ್ಮೆ ಶಬ್ದ. ಮಗುವಿನ ಮೊಗದಲ್ಲಿಯೂ ಖುಷಿಯ ಬುಗ್ಗೆ. ‘ಗಾಳಿ ಊದಿದಾಗ ಸ್ಟ್ರಾ ಕಂಪಿಸುತ್ತದೆ. ಇದರಿಂದ ಶಬ್ದ ಹೊರಹುಮ್ಮಿತು' ಎಂದು ಶಬ್ದ ತರಂಗಗಳ ಪರಿಕಲ್ಪ ನೆಯನ್ನು ಹೇಳಿಕೊಟ್ಟರು. ಪಕ್ಕದಲ್ಲೇ ಕುಳಿತ ಹುಡುಗಿ ಸ್ಟ್ರಾನಲ್ಲಿ ಫ್ಯಾನ್‌ ಮಾದರಿ ತಯಾರಿಸಿ ಹಿಗ್ಗಿದಳು.

ಜೇನಿನ ಮೇಣ, ತೆಂಗಿನ ಎಣ್ಣೆ, ಲೆಮನ್‌ ಎಸೆನ್ಶಿಯಲ್‌ ಎಣ್ಣೆಯನ್ನು ಮಿಶ್ರಣ ಮಾಡಿ ಮೇಣದ ದೀಪದಲ್ಲಿ ಒಂದಿಷ್ಟು ಹೊತ್ತು ಕಾಯಿಸಿದಳು. ಮಗಳಿಗಿಂತ ಹೆಚ್ಚಿಗೆ ಎಕ್ಸೈಟ್‌ ಆಗಿದ್ದ ಅಮ್ಮ ಮಿಶ್ರಣ ಲಿಪ್‌ಬಾಮ್‌ ರೂಪು ತಳೆದಾಗ ಹಿಗ್ಗಿ ನಗುವರಳಿ ಸಿದರು. ಸುತ್ತಲು ನೆರೆದ ಅಮ್ಮಂದಿರು ಲಿಪ್‌ಬಾಮ್‌ ಸುವಾಸನೆ ಆಸ್ವಾದಿಸುತ್ತ ನಿಂತಿದ್ದರು.

ವೇಗ ಹಾಗೂ ವೇಗ ವರ್ಧನೆಯನ್ನು ಅಳತೆ ಮಾಡುವ ಟಿಕ್ಕರ್‌ ಟೈಮರ್‌ ಪ್ರಯೋಗ, ಆಕ್ರಿಲಿಕ್‌ ಮೈಕ್ರೊಸ್ಕೋಪ್‌, ಕ್ಯಾಪಿಲ್ಲರಿ ಸೆಂಟ್ರಿಫ್ಯೂಜ್‌ ಹೀಗೆ ವಿಜ್ಞಾ ನಕ್ಕೆ ಸಂಬಂಧಿಸಿದ ವಿವಿಧ ಪರಿಕಲ್ಪನೆ ಯನ್ನು ವಿದ್ಯಾರ್ಥಿಗಳು ಕಲಿತರು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಥಿಂಕ್‌ಟ್ಯಾಕ್‌ನ 20 ಸಿಬ್ಬಂದಿ ಮಕ್ಕಳಿಗೆ ತರಬೇತಿ ನೀಡಿದರು.

‘ವಿಜ್ಞಾನವನ್ನು ಮಕ್ಕಳು ಖುಷಿ ಖುಷಿಯಾಗಿ ಕಲಿಯಬೇಕು. ಪ್ರಾಯೋಗಿ ಕವಾಗಿ ಕಲಿತರೆ ಚೆನ್ನಾಗಿ ಅರ್ಥವಾಗುತ್ತದೆ. ಸಮಸ್ಯೆ ಪರಿಹರಿಸುವುದು ಹೇಗೆ ಎನ್ನುವ ಕೌಶಲ ಬೆಳೆಯುತ್ತದೆ. ವಿಮರ್ಶಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ. ಉಪಕರಣಗಳನ್ನು ಬಳಸಿ ಅವರೇ ಎಲ್ಲವನ್ನು ಮಾಡುವುದರಿಂದ ಮಕ್ಕಳು ತುಂಬಾ ಖುಷಿಪಡುತ್ತಾರೆ’ ಎಂದರು ಥಿಂಕ್‌ಟ್ಯಾಕ್‌ ಸಹ ಸಂಸ್ಥಾಪಕ ರಘು.

ವಿಜ್ಞಾನ ಪ್ರಯೋಗಕ್ಕೆ ತೆರೆದು ಕೊಂಡ ವಿದ್ಯಾರ್ಥಿಗಳು ಥಿಂಕ್‌ಟ್ಯಾಕ್‌ ಸೋಮವಾರದಿಂದ ಆಯೋಜಿಸಲಿರುವ ಬೇಸಿಗೆ ಶಿಬಿರಕ್ಕೆ ಕೂಡ ಭಾಗವಹಿಸುವ ಉಮೇದು ತೋರುತ್ತಿದ್ದರು.

‘ನಂಗೆ ವಿಜ್ಞಾನ ಇಷ್ಟ. ಇಲ್ಲಿ ಬಂದು ಸ್ಟೆತೊಸ್ಕೋಪ್‌ ಮಾಡಿದೆ. ಸ್ಟ್ರಾನಿಂದ ಶಬ್ದ, ಫ್ಯಾನ್‌ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟರು. ಸ್ನೇಹಿತೆಯರೊಂದಿಗೆ ಬಂದು ಹೊಸ ಹೊಸ ವಿಷಯ ಕಲಿತೆ.’

– ದಿವ್ಯಪ್ರಭಾ, 6ನೇ ತರಗತಿ ವಿದ್ಯಾರ್ಥಿ

‘ನನ್ನ ಮಗಳು ಪ್ರಾರ್ಥನಾ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಒತ್ತಾಯಕ್ಕೇ ಬಂದೆ. ವಿಜ್ಞಾನ ಎಂದರೇ ಭಯ. ಆದರೆ, ಇಲ್ಲಿ ಮೋಜಿನೊಂದಿಗೆ ವಿಜ್ಞಾನ ಕಲಿಸುತ್ತಾರೆ. ಖುಷಿ ಆಯಿತು.’

– ಚೈತ್ರಾ,ಪೋಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.