ADVERTISEMENT

ಹಾಡಹಗಲೇ ದರೋಡೆ: ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:40 IST
Last Updated 4 ಫೆಬ್ರುವರಿ 2011, 19:40 IST

ಬೆಂಗಳೂರು: ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ದುಷ್ಕರ್ಮಿಗಳು ಯುವಕನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬ್ಯಾಟರಾಯನಪುರ ಸಮೀಪದ ಬಾಪೂಜಿನಗರದಲ್ಲಿ ಶುಕ್ರವಾರ ನಡೆದಿದೆ.

ಬಾಪೂಜಿನಗರ ಒಂದನೇ ಮುಖ್ಯರಸ್ತೆಯಲ್ಲಿ ವಾಸವಿದ್ದ ಪ್ರಸನ್ನಕುಮಾರ್ (27) ಕೊಲೆಯಾದವರು. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿಯವರಾದ ಅವರು ಬಿಡಿಎ ನಿವೇಶನಗಳನ್ನು ಕೊಡಿಸುವ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸನ್ನಕುಮಾರ್ ಅವರು ಸಹೋದರ ಪ್ರವೀಣ್‌ಕುಮಾರ್ ಜತೆ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಪ್ರವೀಣ್‌ಕುಮಾರ್ ಬೆಳಿಗ್ಗೆಯೇ ಕೆಲಸಕ್ಕೆ ಹೋಗಿದ್ದರು. ಪ್ರಸನ್ನಕುಮಾರ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಮನೆಗೆ ಬಂದಿರುವ ದುಷ್ಕರ್ಮಿಗಳು ಅವರ ಕೈ ಕಾಲುಗಳನ್ನು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರವೀಣ್‌ಕುಮಾರ್ ಅವರು ಸಂಜೆ ಆರು ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಶ್ವಾನಗಳಿಗೆ ಸುಳಿವು ಸಿಗಬಾರದೆಂದು ಆರೋಪಿಗಳು ಮನೆಯಲ್ಲೆಲ್ಲ ಖಾರದ ಪುಡಿ ಚೆಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ‘ಪ್ರಸನ್ನಕುಮಾರ್ ತನ್ನ ತಾಯಿಯ ಆಭರಣಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದುಕೊಂಡಿದ್ದ ವ್ಯಕ್ತಿಗಳೇ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ. ಅಲ್ಲದೇ ಆರೋಪಿಗಳು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿರುವ ಲಕ್ಷಣಗಳಿಲ್ಲ. ಆದ್ದರಿಂದ ಪರಿಚಿತ ವ್ಯಕ್ತಿಗಳೇ ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.