ಯಲಹಂಕ: `ಚಲನಚಿತ್ರಗಳಲ್ಲಿ ಹೆಚ್ಚಾಗಿರುವ ಕೊಲೆ-ಸುಲಿಗೆ, ಕಾಮ-ಪ್ರೇಮ, ಅತ್ಯಾಚಾರ-ದರೋಡೆ, ಲಾಂಗು-ಮಚ್ಚು, ಭಯ-ಉದ್ವೇಗ ಇತ್ಯಾದಿ ಸನ್ನಿವೇಶಗಳು ಯುವಪೀಳಿಗೆಯನ್ನು ಹಾದಿ ತಪ್ಪಿಸುತ್ತಿವೆ~ ಎಂದು ನಾಟಕರತ್ನ ಗುಬ್ಬಿ ವೀರಣ್ಣ ರಂಗಭೂಮಿ ಕಲಾವಿದರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಗುಬ್ಬಿ ವೀರೇಶ್ ಆರೋಪಿಸಿದರು.
ಅದ್ದಿಗಾನಗಹಳ್ಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ಒಕ್ಕೂಟದ ನಗರ ಜಿಲ್ಲಾ ಹಾಗೂ ಉತ್ತರ ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ತೆಗೆಯುತ್ತಿರುವ ಚಲನಚಿತ್ರಗಳ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸುವಂತೆ ಸೆನ್ಸಾರ್ ಮಂಡಳಿ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾವೇಶ: ಒಕ್ಕೂಟದ ವತಿಯಿಂದ ಡಿ. 6ರಂದು ಯಲಹಂಕದಲ್ಲಿ `ಕಲಾವಿದರ ಬೃಹತ್ ಸಮಾವೇಶ~ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 50 ಸಾವಿರ ಕಲಾವಿದರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬಿರುದು ಪ್ರದಾನ: ರಾಜ್ಯದ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಕಲಾವಿದರೆಲ್ಲ ಒಗ್ಗಟ್ಟಾಗಿ ಕಲಾವಿದರ ಬೇಡಿಕೆಗಳ ಮನವಿ ಪತ್ರವನ್ನು ಮುಂಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ರಂಗಭೂಮಿ ಹಾಗೂ ಜಾನಪದ ಕಲೆಯ ಏಳಿಗೆಗಾಗಿ ದುಡಿದಿರುವ ಕನಿಷ್ಠ 100 ಮಂದಿ ಕಲಾವಿದರಿಗೆ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ `ಕರ್ನಾಟಕ ರಂಗ ಕಲಾ ಕೇಸರಿ~ ಎಂಬ ಬಿರುದು ನೀಡಿ ಗೌರವಿಸಲಾಗುವುದು ಎಂದು ವಿವರ ನೀಡಿದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಬ್ಬನಹಳ್ಳಿ ಕೆಂಪಣ್ಣ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ನಗರ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಂ.ಮಂಜುನಾಥ್, ರಂಗ ನಿರ್ದೇಶಕ ನಾಗರಾಜ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.