ADVERTISEMENT

ಹಾಲಿನ ಪುಡಿ ಆಮದು: ಸಚಿವರ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಿದೇಶಗಳಿಂದ ಹಾಲಿನ ಪುಡಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವ ಸಂಬಂಧ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ಶುಕ್ರವಾರ ಇಲ್ಲಿ ಭರವಸೆ ನೀಡಿದರು.

ಬೆಂಗಳೂರು ಡೇರಿ ಆವರಣದಲ್ಲಿ 20.33 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕದ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

`ಕೃಷಿ ಕ್ಷೇತ್ರದ ಭವಿಷ್ಯದ ಆಧಾರ ಸ್ತಂಭವಾಗಿರುವ ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ಸಿಗಬೇಕಾಗಿದೆ. ಯಾವುದೇ ಕಾರಣಕ್ಕೂ ಹೈನುಗಾರಿಕೆಯನ್ನು ಅವಲಂಬಿಸಿರುವವರಿಗೆ ದರ ಕಡಿಮೆ ಸಿಗಬಾರದು. ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಹಾಲಿನ ಪುಡಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸುತ್ತೇನೆ~ ಎಂದು ಅವರು ಆಶ್ವಾಸನೆ ನೀಡಿದರು.

`ಭಾರತದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿಲ್ಲ. ಪ್ರಸ್ತುತ 117 ಮೆಟ್ರಿಕ್ ಟನ್ ಹಾಲು ಉತ್ಪಾದನೆಯೇ ದಾಖಲೆ. 2021-22ರ ವೇಳೆಗೆ ಹಾಲಿನ ಉತ್ಪಾದನೆ ಪ್ರಮಾಣ 180 ಮೆಟ್ರಿಕ್ ಟನ್‌ಗಳಷ್ಟು ಏರಬೇಕು. ಅಂದರೆ, ಶೇ 5.5ರಷ್ಟು ಉತ್ಪಾದನೆ ಹೆಚ್ಚಾಗಬೇಕಾಗಿದೆ. ಇಲ್ಲದಿದ್ದಲ್ಲಿ ನಾವು ವಿರುದ್ಧ ದಿಕ್ಕಿನಲ್ಲಿ ಸಾಗುವಂತಾಗುತ್ತದೆ~ ಎಂದರು.

ಇನ್ನಷ್ಟು ಸಾಧನೆ ಮಾಡಲಿ: ಸಮಾರಂಭ ಉದ್ಘಾಟಿಸಿದ ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ, `ಪ್ರತಿ ದಿನ ಒಬ್ಬ ಮನುಷ್ಯನಿಗೆ 1/4 ಲೀಟರ್ ಹಾಲಿನ ಅವಶ್ಯಕತೆಯಿದೆ. ಆದರೆ, ಪ್ರಸ್ತುತ 100 ಗ್ರಾಂ ಹಾಲನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಅಂದರೆ, ಇನ್ನೂ 150 ಗ್ರಾಂ ನಷ್ಟು ಅಂದರೆ, ಶೇ 60ರಷ್ಟು ಬೆಳವಣಿಗೆಗೆ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಒಕ್ಕೂಟ ಹೆಜ್ಜೆಯನ್ನಿಡಬೇಕು~ ಎಂದು ಸಲಹೆ ಮಾಡಿದರು.

`ನಗರದ ಉದ್ಯಾನ, ಆಟದ ಮೈದಾನ ಸೇರಿದಂತೆ ಸುಮಾರು 165 ಕಡೆಗಳಲ್ಲಿ ನಂದಿನಿ ಹಾಲು ಮಾರಾಟ ಮಾಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದೆ~ ಎಂದರು.

ಲಾಭಾಂಶದ ಪ್ರಯೋಜನ ರೈತರಿಗೆ ಸಿಗಲಿ: ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, `1994-96ರ ಅವಧಿಯಲ್ಲಿ ಹಾಲು ಒಕ್ಕೂಟ ನಷ್ಟದಲ್ಲಿದ್ದಾಗ ಸರ್ಕಾರ `ನೆಸ್ಲೆ~ ಕಂಪೆನಿಗೆ ಮಾರಾಟ ಮಾಡುವ ಚಿಂತನೆ ನಡೆಸಿತ್ತು. ಆದರೆ, ಆಗ ಪಶು ಸಂಗೋಪನಾ ಸಚಿವನಾಗಿದ್ದ ನಾನು ರಾಜೀನಾಮೆ ನೀಡಲು ಮುಂದಾಗಿದ್ದೆ.

ಅಂತಹ ಸಂಸ್ಥೆ ಇಂದು ಸುಮಾರು ರೂ. 40 ಕೋಟಿ ಲಾಭದಲ್ಲಿರುವುದು ಮೆಚ್ಚುಗೆಯ ಸಂಗತಿ~ ಎಂ ದರು.
 ಹಾಲಿನ ದರ ಏರಿಕೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಬಿನ್ನವತ್ತಳೆಯಲ್ಲಿ ಸರ್ಕಾರವನ್ನು ಕೋರಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, `ಗ್ರಾಹಕರು ಹಾಗೂ ರೈತರಿಗೆ ತೊಂದರೆಯಾಗದ ರೀತಿ ತೀರ್ಮಾನ ಕೈಗೊಳ್ಳುವುದು ಅಗತ್ಯವಾಗಿದೆ~ ಎಂದರು.

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ. ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ಶಾಸಕರಾದ ಇ. ಕೃಷ್ಣಪ್ಪ, ವೆಂಕಟಸ್ವಾಮಿ, ಬಿಬಿಎಂಪಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್‌ಬಾಬು, ಕರ್ನಾಟಕ ಹಾಲು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದರು. ಶಾಸಕ ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.