ADVERTISEMENT

ಹಾವು ಸೆರೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಬೆಂಗಳೂರು: ಕಾನೂನು ಬಾಹಿರವಾಗಿ ಹಾವುಗಳನ್ನು ಹಿಡಿದು ತಂದು ಆಡಿಸುತ್ತಿದ್ದ ಮೂವರನ್ನು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಯಲಹಂಕ ಉಪನಗರದಲ್ಲಿ ಶುಕ್ರವಾರ ಬಂಧಿಸಿದ್ದಾರೆ.

ಮತ್ತೀಕೆರೆಯ ಬಿ.ವಿಲಿಯಂ, ತಮಿಳುನಾಡು ಮೂಲದ ಅನ್ಬುಗನ್ ಮತ್ತು ಸತ್ಯನ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಹೆಬ್ಬಾವು, ಮೂರು ಕೆರೆ ಹಾವು ಮತ್ತು ಮೂರು ನಾಗರ ಹಾವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಯಲಹಂಕ ಉಪನಗರ ಬಸ್ ನಿಲ್ದಾಣದ ಬಳಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮನರಂಜನೆ ಉದ್ದೇಶಕ್ಕಾಗಿ ಆರೋಪಿಗಳು ಹಾವುಗಳೊಂದಿಗೆ ಸಾಹಸಮಯ ಆಟಗಳನ್ನು ಪ್ರದರ್ಶಿಸುತ್ತಿದ್ದರು. ಈ ಬಗ್ಗೆ `ವನ್ಯ~ ಸಂಘದ ಕಾರ್ಯಕರ್ತರು ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿರುವ ಸತ್ಯಮಂಗಲ ಅರಣ್ಯಪ್ರದೇಶದಲ್ಲಿ ಈ ಹಾವುಗಳನ್ನು ಹಿಡಿದುಕೊಂಡು ಬಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಯಲಹಂಕ ನಿವಾಸಿಗಳ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಾವುಗಳನ್ನು ಬಿಬಿಎಂಪಿಯ ಅರಣ್ಯ ಘಟಕದ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ ಹಾವುಗಳಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

`ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ~ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.