ADVERTISEMENT

‘ಹಿಂದೂ ಧರ್ಮ ದೇಶದ ಅಸ್ಮಿತೆಯಲ್ಲ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:34 IST
Last Updated 28 ಫೆಬ್ರುವರಿ 2018, 20:34 IST
ಶ್ರೀರಾಮಾಯಣ ದರ್ಶನಂನ ಕೆಲಭಾಗವನ್ನು ಗಮಕ ರೋಪದಲ್ಲಿ ಪ್ರಸ್ತುತ ಪಡಿಸಿದ ಎಂ.ಆರ್. ಸತ್ಯನಾರಾಯಣ (ಬಲತುದಿ) ಅವರನ್ನು ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಅಭಿನಂದಿಸಿದರು. ಚಿತ್ರದಲ್ಲಿ (ಎಡದಿಂದ) ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ರೆಡ್ಡಿ ಹಾಗೂ ಕೆ. ಮರುಳಸಿದ್ಧಪ್ಪ ಇದ್ದಾರೆ  –ಪ್ರಜಾವಾಣಿ ಚಿತ್ರ
ಶ್ರೀರಾಮಾಯಣ ದರ್ಶನಂನ ಕೆಲಭಾಗವನ್ನು ಗಮಕ ರೋಪದಲ್ಲಿ ಪ್ರಸ್ತುತ ಪಡಿಸಿದ ಎಂ.ಆರ್. ಸತ್ಯನಾರಾಯಣ (ಬಲತುದಿ) ಅವರನ್ನು ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಅಭಿನಂದಿಸಿದರು. ಚಿತ್ರದಲ್ಲಿ (ಎಡದಿಂದ) ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ರೆಡ್ಡಿ ಹಾಗೂ ಕೆ. ಮರುಳಸಿದ್ಧಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಮಾಯಣ, ಮಹಾಭಾರತ ದೇಶದ ಅಸ್ಮಿತೆಗಳೇ ಹೊರತು ಹಿಂದೂ ಧರ್ಮ ಅಥವಾ ಹಿಂದುತ್ವ ಅಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.

ಕುವೆಂಪು ರಚಿಸಿದ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಂದು 50 ವರ್ಷ ಪೂರೈಸಿದ ಅಂಗವಾಗಿ ಕುವೆಂಪು ಭಾಷಾ ಭಾರತಿ ಸಹಯೋಗದಲ್ಲಿ ನ್ಯಾಷನಲ್‌ ಕಾಲೇಜು ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಾವ್ಯಕ್ಕಾಗಿ ಕಾವ್ಯ, ಸಾಹಿತ್ಯಕ್ಕಾಗಿ ಸಾಹಿತ್ಯ ಎಂಬ ಮಾತನ್ನು ಕುವೆಂಪು ಒಪ್ಪುವವರಲ್ಲ. ಸಾಹಿತ್ಯ ಮತ್ತು ಕಾವ್ಯಕ್ಕೆ ಸಾಮಾಜಿಕವಾದ ನೈತಿಕವಾದ ಗುರಿ ಇದೆ ಎಂದು ಅವರು ನಂಬಿದ್ದರು. ಆದ್ದರಿಂದ ತಮ್ಮ ವಿಚಾರವನ್ನು ಮಂಡಿಸಲು ಈಗಾಗಲೇ ಪ್ರಸಿದ್ಧವಾದಂತಹ ರಾಮಾಯಣ, ಮಹಾಭಾರತವನ್ನು ಬಳಸಿಕೊಂಡರು’ ಎಂದರು.

ADVERTISEMENT

ವಿಮರ್ಶಕ ಒ.ಎಲ್‌.ನಾಗಭೂಷಣಸ್ವಾಮಿ, ’ಭಾರತದ ಚಿಂತನೆಯಲ್ಲಿ ಸರ್ವೋದಯ ಸಮನ್ವಯ, ಮನುಷ್ಯ ಸಮಾನ ಎಂಬ ಕಲ್ಪನೆ ಇರಲಿಲ್ಲ. ನಮ್ಮಲ್ಲಿ ಎಲ್ಲ ಕಾಲವೂ ಸಮಾನ ಎಂಬುದು ಇರಲಿಲ್ಲ. ಕೆಲವು ಕಾಲ ಒಳ್ಳೆಯದು. ಕೆಲವು ಕಾಲ ಕೆಟ್ಟದ್ದು. ಒಬ್ಬ ಮನುಷ್ಯ ಕೊಲೆ ಮಾಡಿದರೆ ಶಿಕ್ಷೆ ಎಂಬುದಿದೆ. ಆದರೆ ಭಾರತದ ಧರ್ಮಶಾಸ್ತ್ರದಲ್ಲಿ ಇದು ವ್ಯತಿರಿಕ್ತ. ಕೊಲೆ ಆರೋಪ ಹೊತ್ತವ ಬ್ರಾಹ್ಮಣನಾದರೆ ಬೇರೆ ಶಿಕ್ಷೆ, ವೈಶ್ಯ, ಕ್ಷತ್ರಿಯ, ಶೂದ್ರರಿಗೆ ಬೇರೆ ಶಿಕ್ಷೆ ಇತ್ತು’ ಎಂದರು.

‘19ನೇ ಶತಮಾನದ ನಂತರ 20ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯದ ಹಂಬಲ, ರಾಷ್ಟ್ರದ ಹಂಬಲ ಹುಟ್ಟಿದಾಗ ಸರ್ವೋದಯ ಮತ್ತು ಸಮಾನತೆ ತತ್ವಗಳು ಹುಟ್ಟಿದವು. ಇವು ದೇಶದ ತತ್ವಗಳಾದವು. ಅದನ್ನು ಕಂಡ ಕುವೆಂಪು ಕನ್ನಡದಲ್ಲಿ ರಾಮಾಯಣ ದರ್ಶನಂ ರಚಿಸಿದರು’ ಎಂದು ತಿಳಿಸಿದರು.

* ಈ ದೇಶದಲ್ಲಿ  ರಾಮಾಯಣ ಮತ್ತು ಮಹಾಭಾರತಗಳು ಭಾಷೆ–ಭಾಷೆಗಳ ನಡುವೆ ಸಂಬಂಧ ಸೇತುವೆಯಂತೆ ಕೆಲಸ ಮಾಡಿವೆ–

- ಒ.ಎಲ್‌. ನಾಗಭೂಷಣ ಸ್ವಾಮಿ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.