ಬೆಂಗಳೂರು: ಆಮ್ ಆದ್ಮಿ ಪಕ್ಷ ಮತ್ತು ಛಾತ್ರ ಯುವ ಸಂಘಟನೆ ಸಮಿತಿಯು ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ‘ಹುತಾತ್ಮ ದಿನಾಚರಣೆ’ ಅಂಗವಾಗಿ ಜಾಗೃತಿ ಕಾರ್ಯಕ್ರಮ ಮತ್ತು ಹುತಾತ್ಮರಿಗೆ ಸಂಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕುರಿತು ಮಾತನಾಡಿದ ಚಾತ್ರ ಯುವ ಸಂಘಟನೆ ಸಮಿತಿಯ ಸಂಚಾಲಕ ಪವನ್ ಹೆಗಡೆ, ‘ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷ್ ಸರ್ಕಾರವು 1931 ರ ಮಾರ್ಚ್ 23 ರಂದು ಗಲ್ಲಿಗೇರಿಸಿತ್ತು. ಅವರ ನೆನಪಿಗಾಗಿ ಹಾಗೂ ಅವರ ತ್ಯಾಗ, ಬಲಿದಾನದ ಸ್ಮರಣೆಗಾಗಿ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ’ ಎಂದರು.
‘ಹುತಾತ್ಮ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ನಮ್ಮ ದೇಶದ ಯುವಕರಲ್ಲಿ ದೇಶಭಕ್ತಿಯನ್ನು ಹೆಚ್ಚಿಸಿ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಆದರ್ಶಗಳನ್ನು ಪಾಲಿಸುವಂತೆ ಅವರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು.
ಸ್ವಯಂ ಸೇವಕ ಪ್ರದೀಪ್, ‘ಯುವಕರು ದೇಶದ ಕುರಿತು ಯೋಚಿಸಬೇಕು. ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ 23 ನೇ ವಯಸ್ಸಿನಲ್ಲಿಯೇ ಪ್ರಾಣತೆತ್ತ ಭಗತ್‌ಸಿಂಗ್ ಆದರ್ಶವಾಗಬೇಕು. ಅಂದಿನ ಯುವಕರು ಬ್ರಿಟಿಷರ ವಿರುದ್ಧ ಹೋರಾಡಿದರು. ಇಂದಿನ ಯುವಕರು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು’ ಎಂದರು. ಅನೇಕ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಯೂತ್ ಫಾರ್ ನೇಷನ್ ಸಂಘಟನೆ: ಯೂತ್ ಫಾರ್ ನೇಷನ್ ಸಂಘಟನೆ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮ ನಮನ ಕಾರ್ಯಕ್ರಮ ಆಯೋಜಿಸಿತ್ತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್.ಸುನೀಲ್ ಕುಮಾರ್, ‘ದೇಶಕ್ಕಾಗಿ ಪ್ರಾಣತೆತ್ತ ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರ ತ್ಯಾಗ ಬಲಿದಾನದ ಸ್ಮರಣೆಗೆ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ’ ಎಂದರು.
‘ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ಅಂತಹ ನಾಯಕರನ್ನು ದೇಶದ ಜನತೆ ಮರೆತಿದ್ದಾರೆ. ಆದ್ದರಿಂದ, ಅವರ ಕುರಿತು ಇಂದಿನ ಪೀಳಿಗೆಗೆ ತಿಳಿಸಬೇಕಾಗಿದೆ’ ಎಂದು ಹೇಳಿದರು. ‘ಹುತಾತ್ಮರಿಗೆ ಮೇಣದ ಬತ್ತಿ ಹಚ್ಚಿ ಅವರನ್ನು ಸ್ಮರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.