ADVERTISEMENT

‘ಹೃದಯಾಘಾತ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ವಾಯುಮಾಲಿನ್ಯ?

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
‘ಹೃದಯಾಘಾತ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ವಾಯುಮಾಲಿನ್ಯ?
‘ಹೃದಯಾಘಾತ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ವಾಯುಮಾಲಿನ್ಯ?   

ಬೆಂಗಳೂರು: ನಗರದಲ್ಲಿ ವಾಯುಮಾಲಿನ್ಯದಿಂದಾಗಿ ಹೃದಯಾಘಾತ ಪ್ರಮಾಣ ಹೆಚ್ಚುತ್ತಿದೆಯೇ? ಹೌದು ಎನ್ನುತ್ತಾರೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌.ಮಂಜುನಾಥ್‌.

‘ಹೃದಯಾಘಾತದ ಚಿಕಿತ್ಸೆಗಾಗಿ ನಮ್ಮ ಸಂಸ್ಥೆಯ ತುರ್ತು ನಿಗಾ ಘಟಕಕ್ಕೆ ದಾಖಲಾದವರ ಪೈಕಿ ಶೇ 20ರಷ್ಟು ಮಂದಿ ವಾಯುಮಾಲಿನ್ಯದಿಂದಾಗಿಯೇ ಈ ಸಮಸ್ಯೆ ಎದುರಿಸಿದ್ದಾರೆ. ವಾಯುಮಾಲಿನ್ಯದಿಂದ ಹೃದಯಾಘಾತಕ್ಕೆ ಒಳಗಾಗುವವರಲ್ಲಿ ಹೆಚ್ಚಿನವರು ಚಾಲಕರು’ ಎನ್ನುತ್ತಾರೆ ಅವರು.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ ಈ ಕುರಿತು ವಿಶೇಷ ಅಧ್ಯಯನ ನಡೆಸಲು ಮುಂದಾಗಿದೆ. 500 ರಿಕ್ಷಾ ಚಾಲಕರು ಹಾಗೂ 500 ಸಂಚಾರ ಪೊಲೀಸರ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಣೆಗೆ ಒಳಪಡಿಸಲಿದೆ.

ADVERTISEMENT

‘ಸಲ್ಫರ್‌ ಡೈ ಆಕ್ಸೈಡ್‌, ಕಾರ್ಬನ್‌ ಮಾನಾಕ್ಸೈಡ್‌, ನೈಟ್ರೋಜನ್‌ ಡೈ ಆಕ್ಸೈಡ್‌, ಸೀಸದಂತಹ ವಿಷಕಾರಿ ಅಂಶಗಳು ಗಾಳಿಯಲ್ಲಿ ಸೇರಿಕೊಂಡಿವೆ. ಇದಕ್ಕೆ ಪ್ರಮುಖ ಕಾರಣ ವಾಹನಗಳು ಹೊರಸೂಸುವ ಹೊಗೆ’ ಎಂದು ಸಾಕ್ರ ಆಸ್ಪತ್ರೆಯ ಕಾರ್ಡಿಯೊ–ಥೊರಾಸಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಆದಿಲ್ ಸಿದ್ಧಿಕ್‌ ವಿವರಿಸಿದರು.

‘ವ್ಯಕ್ತಿಯು ಏಕಕಾಲಕ್ಕೆ ಎಷ್ಟು ಪ್ರಮಾಣದ ಗಾಳಿಯನ್ನು ಉಸಿರಾಡುತ್ತಾನೆ, ಅದನ್ನು ಎಷ್ಟು ಹೊತ್ತು ಶ್ವಾಸಕೋಶದಲ್ಲಿ ಹಿಡಿದಿಟ್ಟುಕೊಳ್ಳುತ್ತಾನೆ ಎಂಬುದನ್ನೂ ಪರಿಗಣಿಸಬೇಕು. ಚಾಲಕರು, ಕೈಗಾರಿಕಾ ಪ್ರದೇಶಗಳ ಆಸುಪಾಸಿನಲ್ಲಿ ವಾಸಿಸುವವರು ಈ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ನಾರಾಯಣ ಹೃದಯಾಲಯದ ಹೃದಯ ಕಸಿ ತಜ್ಞ ಡಾ. ಭಗೀರಥ್‌ ರಘುರಾಮನ್‌.

‘ಹೃದಯದ ಸಮಸ್ಯೆ ಹೊಂದಿರುವವರು ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಿಂದ ದೂರ ಉಳಿಯುವುದು ಒಳ್ಳೆಯದು. ಅಲ್ಪ ಪ್ರಮಾಣದಲ್ಲಿ ವಿಷಪೂರಿತ ಗಾಳಿಯನ್ನು ಉಸಿರಾಡಿದರೂ ಅವರು ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ’ ಎಂದರು. 

ಗಾಳಿಯಲ್ಲಿ ತೇಲಾಡುವ ಕಣಗಳು ದೇಹವನ್ನು ಸೇರಿ ಶೇಖರಣೆಗೊಳ್ಳುತ್ತವೆ. ಇವು ರಕ್ತನಾಳಗಳಲ್ಲಿ ರಕ್ತದ ಹರಿವಿಗೆ ಅಡ್ಡಿಪಡಿಸುವುದಲ್ಲದೇ ಉರಿಯೂತ ಸೃಷ್ಟಿಸಬಲ್ಲವು ಎನ್ನುತ್ತಾರೆ ವೈದ್ಯರು.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 2016ರ ಏಪ್ರಿಲ್‌ನಲ್ಲಿ ಎಲ್ಲ 15 ನಿಗಾ ಕೇಂದ್ರಗಳ ಬಳಿ ಸಾಧಾರಣ ಪ್ರಮಾಣದ ವಾಯುಮಾಲಿನ್ಯ ಇತ್ತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಇಷ್ಟು ವಾಯುಮಾಲಿನ್ಯವೂ ಮಕ್ಕಳು ಹಾಗೂ ದೊಡ್ಡವರಲ್ಲಿ ಉಸಿರಾಟದ ಸಮಸ್ಯೆಗೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಲ್ಲದು.

2017ರ ಮಾರ್ಚ್‌ನಲ್ಲಿ ಆರು ನಿಗಾ ಕೇಂದ್ರಗಳ ಬಳಿ ವಾಯುಮಾಲಿನ್ಯ ಸಾಧಾರಣ ಪ್ರಮಾಣದಲ್ಲಿ ಇರುವುದು ಕಂಡುಬಂದಿತ್ತು. ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಹೊಸೂರು ರಸ್ತೆ, ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌, ವೈಟ್‌ಫೀಲ್ಡ್‌ ರಸ್ತೆ, ಕೆಎಚ್‌ಬಿ ಕೈಗಾರಿಕಾ ಪ್ರದೇಶ, ಯಲಹಂಕ, ಸ್ವಾನ್‌ ಸಿಲ್ಕ್‌ ಪ್ರೈವೇಟ್‌ ಲಿಮಿಟೆಡ್‌, ಪೀಣ್ಯ, ಅರ್ಬನ್‌ ಇಕೊ ಪಾರ್ಕ್‌, ಟೆರ್ರಿ ಕಚೇರಿ, ಹಳೆ ವಿಮಾನ ನಿಲ್ದಾಣ ರಸ್ತೆ ಪ್ರದೇಶಗಳಲ್ಲಿ ವಾಯುಮಾಲಿನ್ಯ ಇತ್ತು.

‘ವಾಹನಗಳು ಹೆಚ್ಚು ವೇಗವಾಗಿ ಸಂಚರಿಸುವುದಕ್ಕೆ ಅವಕಾಶ ಸಿಕ್ಕರೆ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ’ ಎಂದ ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.