ADVERTISEMENT

ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ: ಅಪರಾಧಿಗಳಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:51 IST
Last Updated 3 ಮಾರ್ಚ್ 2018, 19:51 IST

ಬೆಂಗಳೂರು: ವೈಯಾಲಿಕಾವಲ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಬೀರಯ್ಯ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ಅಪರಾಧಿಗಳಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹8 ಸಾವಿರ ದಂಡ ವಿಧಿಸಿ ನಗರದ 8ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ವೈಯಾಲಿಕಾವಲ್‌ ನಿವಾಸಿಗಳಾದ ಜಗನ್ನಾಥ್‌ (30), ಜನಾರ್ದನ್ (40), ಈರಣ್ಣಗೌಡ ಬಿರಾದಾರ (30) ಹಾಗೂ ಜಾಲಹಳ್ಳಿಯ ನರಸಿಂಹಮೂರ್ತಿ (30) ಶಿಕ್ಷೆಗೆ ಗುರಿಯಾದವರು. 2009ರ ನವೆಂಬರ್‌ 8ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಮಹೇಶ್‌ ಬಾಬು ಈ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್(ಪಿಪಿ) ಜಿ.ಎನ್.ಅರುಣ್‌ ವಾದಿಸಿದ್ದರು.

ವಿನಾಯಕ ವೃತ್ತದಲ್ಲಿರುವ ‘ಶ್ರೀನಿವಾಸ್‌ ಬಾರ್‌ ಆ್ಯಂಡ್‌ ‌ರೆಸ್ಟೊರೆಂಟ್‌’ ಮುಂಭಾಗದ ರಸ್ತೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನಿಂತಿದ್ದ ಅಪರಾಧಿಗಳು, ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದರು. ಅದೇ ಸ್ಥಳದಲ್ಲಿ ಗಸ್ತಿನಲ್ಲಿದ್ದ ಬೀರಯ್ಯ, ಅಪರಾಧಿಗಳ ವರ್ತನೆಯನ್ನು ಪ್ರಶ್ನಿಸಿದ್ದರು.

ADVERTISEMENT

ಕೋಪಗೊಂಡ ಅಪರಾಧಿಗಳು, ಬೀರಯ್ಯ ಜತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಮವಸ್ತ್ರ ಹರಿದು ಎಳೆದಾಡಿ ಮೈ ಮೇಲೆ ಕಲ್ಲು ಎತ್ತಿ ಹಾಕಿ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್‌, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಎಂದು ಜಿ.ಎನ್.ಅರುಣ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.