ADVERTISEMENT

ಹೈಕೋರ್ಟ್‌ಗೆ ವ್ಯರ್ಥ ಅರ್ಜಿ ಸಲ್ಲಿಕೆ: ಐವತ್ತು ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:00 IST
Last Updated 24 ಫೆಬ್ರುವರಿ 2011, 20:00 IST

ಬೆಂಗಳೂರು: ವಿನಾಕಾರಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೊಬ್ಬರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ.

ನ್ಯೂ ತಿಪ್ಪಸಂದ್ರ ಬಳಿಯ ಐಶ್ವರ್ಯ ರೆಸಿಡೆನ್ಸಿ ಮಾಲೀಕರ ಸಂಘಕ್ಕೆ ಈ ದಂಡ ವಿಧಿಸಿ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಬುಧವಾರ ಆದೇಶಿಸಿದ್ದಾರೆ. ಜಿಎಂಪಾಳ್ಯದ 3ನೇ ಮುಖ್ಯ ರಸ್ತೆಯಲ್ಲಿ ಎಲ್.ಸಿ.ಕೃಷ್ಣಮೂರ್ತಿ ಎನ್ನುವ ಬಿಲ್ಡರ್ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಅರ್ಜಿಯಲ್ಲಿ ದೂರಲಾಗಿತ್ತು.

ಈ ಕಟ್ಟಡದ ಕುರಿತಾಗಿ 2002ರಲ್ಲಿ ಅರ್ಜಿ ಸಲ್ಲಿಸಿದ್ದಾಗ ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿತ್ತು. ಅವರು ತಮ್ಮ ವರದಿಯಲ್ಲಿ ಕಟ್ಟಡ ಅಕ್ರಮವಾಗಿದೆ ಎಂದಿದ್ದಾರೆ. ಈ ವರದಿಯನ್ನು ಬೆಸ್ಕಾಂ ಕೂಡ ಅಂಗೀಕರಿಸಿದೆ. ಇದರ ಹೊರತಾಗಿಯೂ ಕಟ್ಟಡಕ್ಕೆ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಕ್ಕೆ ಅವರು ಕೋರಿದ್ದರು.

ಆದರೆ ಇದೇ ಅರ್ಜಿದಾರರು ತಮ್ಮದೇ ಕಟ್ಟಡಕ್ಕೆ ವಿದ್ಯುತ್ ಪೂರೈಕೆ ನೀಡುವಂತೆ ಕೋರಿ ಹಿಂದೊಮ್ಮೆ ಅರ್ಜಿ ಸಲ್ಲಿಸಿದ್ದರು. ಇದೇ ನ್ಯಾಯಮೂರ್ತಿಗಳು, ಕಳೆದ ವಾರ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಕ್ಕೆ ಅವರು ಬಿಬಿಎಂಪಿಗೆ ಆದೇಶಿಸಿದ್ದರು (ಆದರೆ ಈ ಆದೇಶಕ್ಕೆ ಅರ್ಜಿದಾರರು ವಿಭಾಗೀಯ ಪೀಠದಿಂದ ತಡೆ ಪಡೆದುಕೊಂಡಿದ್ದಾರೆ). ಈಗ ತಮ್ಮ ಪಕ್ಕದ ಕಟ್ಟಡದ ಬಗ್ಗೆ ಅರ್ಜಿ ಸಲ್ಲಿಸಿರುವುದು ಅವರ ಅಸಮಾಧಾನಕ್ಕೆ ಕಾರಣವಾಯಿತು.

ಕಟ್ಟಡ ನೆಲಸಮ ಮಾಡುವುದು  ಸಂಬಂಧಿತ ಅಧಿಕಾರಿಗಳಿಗೆ ಬಿಟ್ಟ ವಿಷಯ. ಆ ಬಗ್ಗೆ ಕೋರ್ಟ್ ಪ್ರವೇಶ ಮಾಡುವುದಿಲ್ಲ ಎಂದು ಹೇಳಿ 50 ಸಾವಿರ ರೂಪಾಯಿಗಳ ದಂಡ ವಿಧಿಸಿ ನ್ಯಾಯಮೂರ್ತಿಗಳು ಆದೇಶಿಸಿದರು.

‘ಮುತ್ತಪ್ಪ ರೈ ಮನವಿ ಪರಿಶೀಲಿಸಿ’
ಭೂಗತ ಚಟುವಟಿಕೆಯಲ್ಲಿ ತೊಡಗಿದ್ದ ಮುತ್ತಪ್ಪ ರೈ ಅವರಿಗೆ ಪೊಲೀಸ್ ರಕ್ಷಣೆ ನೀಡುವ ಸಂಬಂಧದ ಮನವಿಯನ್ನು ನಾಲ್ಕು ವಾರಗಳ ಒಳಗೆ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಹೈಕೋರ್ಟ್ ಬುಧವಾರ ಆದೇಶಿಸಿದೆ.

ತಮಗೆ ಪೊಲೀಸ್ ರಕ್ಷಣೆ ನೀಡಲು ಸಂಬಂಧಿತ ಅಧಿಕಾರಿಗಳು ವಿಫಲವಾಗಿರುವುದಾಗಿ ದೂರಿ ರೈ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.