ADVERTISEMENT

ಹೈಕೋರ್ಟ್‌ ಮೆಟ್ಟಿಲೇರಿದ ನಲಪಾಡ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 20:00 IST
Last Updated 5 ಮಾರ್ಚ್ 2018, 20:00 IST

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮೊಹಮದ್‌ ನಲಪಾಡ್ ಹ್ಯಾರಿಸ್‌ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿದಾರರ ಪರ ವಕಾಲತ್ತು ವಹಿಸಿರುವ ವಕೀಲರು ಸೋಮವಾರ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದರು.

‘ಅರ್ಜಿಯನ್ನು ಇಂದೇ  (ಮಾ.05) ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಕೋರಿದರು. ಇದಕ್ಕೆ ನ್ಯಾಯಮೂರ್ತಿಗಳು, ‘ಸರದಿ ಪ್ರಕಾರವೇ ಅರ್ಜಿ ವಿಚಾರಣೆಗೆ ಬರಲಿದೆ‘ ಎಂದು ಮೆಮೊ ನಿರಾಕರಿಸಿದರು. ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಲಾಗಿದೆ.

ADVERTISEMENT

ಪ್ರಕರಣದಲ್ಲಿ ಎಂಟು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇವರಲ್ಲಿ ಶ್ರೀಕೃಷ್ಣ ಎಂಬುವನು ತಲೆ ತಪ್ಪಿಸಿಕೊಂಡಿದ್ದಾನೆ. ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಮೊಹಮದ್ ನಲಪಾಡ್‌ ಹ್ಯಾರಿಸ್‌ ಕಳೆದ ತಿಂಗಳು 17ರಂದು ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಮರಳಿದ ವಿದ್ವತ್

ಬೆಂಗಳೂರು: ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮದ್ ನಲಪಾಡ್ ಹಾಗೂ ಸಹಚರರಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಭಾನುವಾರ ರಾತ್ರಿ ಮನೆಗೆ ಮರಳಿದ್ದಾರೆ.

ಉದ್ಯಮಿ ಲೋಕನಾಥನ್‌ ಅವರ ಮಗ ವಿದ್ವತ್, ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಫೆ.18ರ ರಾತ್ರಿ ಹಲ್ಲೆಗೊಳಗಾಗಿದ್ದರು. ಅಂದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 16 ದಿನಗಳ ಚಿಕಿತ್ಸೆ ನೀಡಲಾಗಿದೆ.

‘ವಿದ್ವತ್‌ ಶೇ 90 ರಷ್ಟು ಗುಣಮುಖರಾಗಿದ್ದಾರೆ. ಅವರನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯಬಹುದು’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.