ತಲಘಟ್ಟಪುರ: ಪ್ರತಿಯೊಬ್ಬ ಮಹಿಳೆ ಹೈನುಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ನಾಗನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿ ಲೀಟರ್ ಹಾಲಿಗೆ ರೂ. 2 ಪ್ರೋತ್ಸಾಹಧನ ನೀಡಲು ಪ್ರಯತ್ನಿಸಿದ ಫಲವಾಗಿ ಈಗ ಹಾಲಿಗೆ ಉತ್ತಮ ಬೆಲೆ ದೊರೆಯುವಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಮಹೇಶ್‌ಚಂದ್ರ, ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು 40 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಹಾಲು ಒಕ್ಕೂಟ ತಲಾ ರೂ. 25 ಸಾವಿರ, ಕೆಎಂಎಫ್ ಒಂದು ಲಕ್ಷ ಉಚಿತವಾಗಿ ನೀಡಿದೆ ಎಂದರು.
ಯಶವಂತಪುರ ಕ್ಷೇತ್ರದ ಜಾಗೃತಿ ಸಮಿತಿ ಅಧ್ಯಕ್ಷ ಜಿ. ವಿಜಯಕುಮಾರ್, ರೈತ ಮುಖಂಡ ಪಂಚಲಿಂಗಯ್ಯ ಮಾತನಾಡಿ, ಬರಗಾಲ ಮತ್ತು ನೀರಿನ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ಸರ್ಕಾರ ಹಿಂಡಿ, ಭೂಸ, ರವೆಯನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಒತ್ತಾಯಿಸಿದರು.
ಜಿ.ಪಂ. ಸದಸ್ಯರಾದ ಎ.ಶಿವಕುಮಾರ್, ಮಂಜುಳಾ ಅಶ್ವತ್ಥನಾಯ್ಕ, ಯಶವಂತಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎಲ್.ಕೃಷ್ಣಪ್ಪ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಶಶಿಕುಮಾರ್, ಜೆಡಿಎಸ್ ಮುಖಂಡ ಟಿ.ಎನ್.ಜವರಾಯಿಗೌಡ, ಗ್ರಾ.ಪಂ. ಅಧ್ಯಕ್ಷರಾದ ಮುನಿಕಾಳಪ್ಪ, ಈರಯ್ಯ, ಸ್ಥಳೀಯ ಹಾಲು ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ನಾರಾಯಣಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.