ADVERTISEMENT

ಹೊಣೆ ಅರಿತರೆ ಬದಲಾವಣೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 18:30 IST
Last Updated 17 ಆಗಸ್ಟ್ 2012, 18:30 IST
ಹೊಣೆ ಅರಿತರೆ ಬದಲಾವಣೆ ಸಾಧ್ಯ
ಹೊಣೆ ಅರಿತರೆ ಬದಲಾವಣೆ ಸಾಧ್ಯ   

ಬೆಂಗಳೂರು: `ಪ್ರಜಾಪ್ರಭುತ್ವದಷ್ಟು ಉತ್ತಮವಾದ ವ್ಯವಸ್ಥೆ ಬೇರೆ ಯಾವುದೂ ಇಲ್ಲ. ಜನರೂ ಸೇರಿದಂತೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಈಗಿನ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ~ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

ಅಖಿಲ ಭಾರತ ಮಾಜಿ ಶಾಸಕರ ಪರಿಷತ್ತು ಹಾಗೂ ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಸಹಯೋಗದಲ್ಲಿ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ `ರಾಜಕೀಯ ಅಂದು-ಇಂದು~ ಕುರಿತು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ನಡೆದ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆ ರಾಷ್ಟ್ರಗಳಲ್ಲಿ ಕೆಲವೊಮ್ಮೆ ಆಂತರಿಕ ಸಂಘರ್ಷಗಳು ಸಂಭವಿಸುತ್ತವೆ. ಭಾರತ ಇಂದಿಗೂ ಸಹ ಪರಿಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿದಿದೆ. ಜನರೇ ಈ ಸಂವಿಧಾನವನ್ನು ಸ್ವೀಕರಿಸಿದವರು. ಆದರೆ, ಇಂದು ಜನತಾ ಸೇವಕರೇ ಮತದಾರರನ್ನು ನಮ್ಮನ್ನು ಪ್ರಶ್ನಿಸಲು ನೀವು ಯಾರು ಎಂಬುದಾಗಿ ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾವು ಜನತಾ ಸೇವಕರು ಎಂಬುದನ್ನು ಒಪ್ಪಿಕೊಳ್ಳಲು ಜನಪ್ರತಿನಿಧಿಗಳು ಸಿದ್ಧರಿಲ್ಲ~ ಎಂದು ಅವರು ವಿಷಾದಿಸಿದರು. ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಇರಬಾರದು ಎಂದು ಆಗ್ರಹಿಸಿ 2007ರಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ವೀರಪ್ಪ ಮೊಯಿಲಿ ಅವರಿಗೆ ಪತ್ರ ಬರೆದಿದ್ದೆ. ಇಂದು ಕ್ಷೇತ್ರದಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಇಂತಹ ಅಧಿಕಾರಿಯೇ ಬೇಕು ಎಂದು ಶಾಸಕರೇ ಕೇಳುತ್ತಿದ್ದಾರೆ. ಖಾಸಗಿ ಕ್ಲಬ್‌ಗಳಲ್ಲಿ ಸದಸ್ಯತ್ವ ನೀಡಬೇಕು ಎಂದು ಸದನದಲ್ಲೇ ಒತ್ತಾಯಿಸುತ್ತಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ನಂದೀಶ್ ರೆಡ್ಡಿ, ಮಾಜಿ ಸ್ಪೀಕರ್ ಬಿ.ಜಿ.ಬಣಕಾರ್, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗ್ಡೆ, ಮಾಜಿ ಶಾಸಕರ ಪರಿಷತ್ತಿನ ಸಂಯೋಜಕ ಐವನ್ ನಿಗ್ಲಿ ಮತ್ತಿತರರು ಉಪಸ್ಥಿತರಿದ್ದರು.

`ಬೇಲಿಯೇ ಎದ್ದು...~
`ದೇಶದ 10 ಮಹಾಭ್ರಷ್ಟರಲ್ಲಿ ಎಂಟು ಮಂದಿ ಮುಖ್ಯಮಂತ್ರಿಗಳೇ ಇದ್ದಾರೆ. ಮುಖ್ಯಮಂತ್ರಿಗಳೇ ಈ ರೀತಿ ಕುಖ್ಯಾತಿ ಗಳಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ~ ಎಂದು ಅಖಿಲ ಭಾರತ ಮಾಜಿ ಶಾಸಕರ ಪರಿಷತ್ತಿನ ಉಪಾಧ್ಯಕ್ಷ ಬಿ.ವಿ.ರಾಮಚಂದ್ರ ರೆಡ್ಡಿ ವಿಶ್ಲೇಷಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಸ್ವಾತಂತ್ರ್ಯ ಸಿಕ್ಕ ಆರಂಭದಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈಗ ಸ್ಥಿತಿ ಬದಲಾಗಿದೆ. ನಾವು ಶಾಸಕರಾಗಿದ್ದಾಗ ಆಸ್ತಿಯ ಲೆಕ್ಕ ಕೊಡಬೇಕಾದ ಪ್ರಮೇಯ ಎದುರಾಗಿರಲಿಲ್ಲ. ಈಗ ಜನಪ್ರತಿನಿಧಿಗಳೇ ಆಸ್ತಿ ಲೆಕ್ಕ ಕೊಡಿ ಎಂಬ ಒತ್ತಾಯ ಹೇರುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಕಳವಳ ವ್ಯಕ್ತಪಡಿಸಿದರು.

`ಎಲ್ಲರೂ ಮತದಾನ ಮಾಡಬೇಕು~

`ಪ್ರತಿಭಟನೆ, ಹೋರಾಟಗಳಲ್ಲಿ ಭಾಗವಹಿಸುವವರು ಹಾಗೂ ಶಿಕ್ಷಿತರು ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ದೇಶದ ಮತದಾರರೆಲ್ಲ ಮತದಾನ ಮಾಡಲು ಆರಂಭಿಸಿದಾಗ ಈಗಿನ ಸ್ಥಿತಿಯಲ್ಲಿ ಬದಲಾವಣೆ ಆಗಬಹುದು~ ಎಂದು ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

`ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ನಿಜ. ಸದನದಲ್ಲಿ ಉತ್ತಮ ಚರ್ಚೆಗಳು ಆಗುತ್ತವೆ. ಆದರೆ, ಕೆಲವೇ ಜನರು ಮಾಡುವ ಗಲಾಟೆಗಳು ಸುದ್ದಿಯಾಗುತ್ತವೆ. ಚುನಾವಣೆಯಲ್ಲಿ ಹಣವೇ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದಾಗಿ ಉತ್ತಮ ವ್ಯಕ್ತಿಗಳು ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಿನ ಸ್ಥಿತಿಯಲ್ಲಿ ಬದಲಾವಣೆಯಾಗುವ ಅಗತ್ಯ ಇದೆ~ ಎಂದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.