ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಡಿ ಚೆನ್ನೈ ಮೂಲದ ಅನ್ವರ್‌್ (32) ಎಂಬಾತನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
‘ಇಂಡಿಗೊ ಸಂಸ್ಥೆಯ ‘6ಇ-096’ ವಿಮಾನದ ಮೂಲಕ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಅನ್ವರ್‌ನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಅವರು ಚಿನ್ನ ಸಾಗಾಟ ಮಾಡುತ್ತಿರುವುದು ಗೊತ್ತಾಯಿತು’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ವಿಮಾನದಿಂದ ಇಳಿದಿದ್ದ ಆರೋಪಿ, ರಟ್ಟಿನ ಪೆಟ್ಟಿಗೆಯನ್ನು ಹಿಡಿದುಕೊಂಡು ಹೊರಗೆ ಬರುತ್ತಿದ್ದರು. ಲೋಹ ಶೋಧಕ ಯಂತ್ರದಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಯಾವುದೋ ವಸ್ತುವಿರುವುದು ಗೊತ್ತಾಯಿತು. ಆರಂಭದಲ್ಲಿ ಪೆಟ್ಟಿಗೆ ಪರಿಶೀಲಿಸಿದಾಗ ಅದರಲ್ಲಿ ಬಟ್ಟೆ ಹಾಗೂ ತಿನಿಸುಗಳು ಮಾತ್ರ ಇದ್ದವು. ಹೀಗಾಗಿ 2–3 ಬಾರಿ ಪರಿಶೀಲನೆ ನಡೆಸಿದಾಗಲೂ ಅನುಮಾನ ನಿವಾರಣೆ ಆಗಿರಲಿಲ್ಲ’.
‘ಕೊನೆಗೆ ರಟ್ಟಿನ ಎಳೆಗಳನ್ನು ಒಂದೊಂದಾಗಿ ಬಿಚ್ಚಲಾಯಿತು. ಆಗ ಎಳೆಗಳ ಮಧ್ಯೆ ಚಿನ್ನವನ್ನು ಅಂಟಿಸಿದ್ದು ಬೆಳಕಿಗೆ ಬಂತು. ಪೂರ್ತಿ ರಟ್ಟನ್ನು ಹರಿದಾಗ ಅದರಲ್ಲಿ ₹22.6 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಯಿತು’ ಎಂದು ಮಾಹಿತಿ ನೀಡಿದರು.
ಬಿಟ್ಟು ಹಿಡಿದ ಅಧಿಕಾರಿಗಳು: ವಿಮಾನ ನಿಲ್ದಾಣದಿಂದ ಹೊರಹೋಗುತ್ತಿದ್ದ ವೇಳೆ ಆರೋಪಿ ಬಳಿ ಇದ್ದ ರಟ್ಟಿನ ಪೆಟ್ಟಿಗೆ ಪರಿಶೀಲಿಸಿದ್ದ ಅಧಿಕಾರಿಗಳು, ಅದರಲ್ಲಿ ಬಟ್ಟೆ, ತಿನಿಸು ಮಾತ್ರ ಇದ್ದಿದ್ದರಿಂದ ಬಿಟ್ಟು ಕಳುಹಿಸಿದ್ದರು.
‘ಲೋಹ ಶೋಧಕದಲ್ಲಿ ತಪಾಸಣೆ ಬಳಿಕ ಆರೋಪಿ ಸ್ವಲ್ಪ ದೂರ ಹೋಗಿದ್ದರು. ಸಿಬ್ಬಂದಿಯೊಬ್ಬರು, ಪೆಟ್ಟಿಗೆಯಲ್ಲಿ ಚಿನ್ನವಿದೆ ಎಂದು ಬಲವಾಗಿ ಅನುಮಾನಪಟ್ಟಿದ್ದರಿಂದ ಪುನಃ ಆರೋಪಿಯನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಚಿನ್ನ ಸಾಗಾಟದ ಕೃತ್ಯ ಬಯಲಾಯಿತು’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.