ADVERTISEMENT

ಹೊಸೂರಿನ ಮೋರಿಯಲ್ಲಿ ಶವ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:35 IST
Last Updated 26 ಮಾರ್ಚ್ 2018, 19:35 IST
ಹೊಸೂರಿನ ಮೋರಿಯಲ್ಲಿ ಶವ!
ಹೊಸೂರಿನ ಮೋರಿಯಲ್ಲಿ ಶವ!   

ಬೆಂಗಳೂರು: ಯಲಹಂಕದಿಂದ ಜ.18ರ ರಾತ್ರಿ ನಾಪತ್ತೆಯಾಗಿದ್ದ ಓಲಾ ಚಾಲಕ ರಿನ್‌ಸನ್ (23), ಹೊಸೂರಿನ ಬೆದ್ರಪಲ್ಲಿ ಗ್ರಾಮದ ಮೋರಿಯಲ್ಲಿ ಭಾನುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ರಿನ್‌ಸನ್, ಪೋಷಕರ ಜತೆ ಕಾವಲ್‌ಬೈರಸಂದ್ರ ಸಮೀಪದ ಮುನಿನಂಜಪ್ಪ ಬ್ಲಾಕ್‌ನಲ್ಲಿ ನೆಲೆಸಿದ್ದರು. ಜ.18ರ ರಾತ್ರಿ ಕೆಲಸಕ್ಕೆ ಹೋಗಿದ್ದ ಅವರು, ಎರಡು ದಿನಗಳಾದರೂ ಮನೆಗೆ ವಾಪಸಾಗಿರಲಿಲ್ಲ. ಮೊಬೈಲ್ ಸಹ ಸ್ವಿಚ್ಡ್ಆಫ್ ಆಗಿದ್ದರಿಂದ ಆತಂಕಕ್ಕೆ ಒಳಗಾದ ಅವರ ತಂದೆ ಟಿ.ಎಲ್.ಸೋಮನ್, ಮಗ ನಾಪತ್ತೆಯಾಗಿರುವ ಸಂಬಂಧ ದೇವರಜೀವನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು.

ತನಿಖೆ ಪ್ರಾರಂಭಿಸಿದ ಪೊಲೀಸರು, ಮೊದಲು ಓಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. ಆಗ, ‘ಜ.18ರ ರಾತ್ರಿ 8.30ರ ಸುಮಾರಿಗೆ ಬಾಗಲಗುಂಟೆಗೆ ತೆರಳಿದ್ದ ರಿನ್‌ಸನ್, ಅಲ್ಲಿಂದ ಪ್ರಯಾಣಿಕರೊಬ್ಬರನ್ನು ಯಲಹಂಕಕ್ಕೆ ಡ್ರಾಪ್ ಮಾಡಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲೇ ಕ್ಯಾಬ್‌ನ ಜಿಪಿಎಸ್ ಸಂಪರ್ಕ ಕಡಿತವಾಗಿದೆ. ಮೊಬೈಲ್ ಸಹ ಸ್ವಿಚ್ಡ್‌ಆಫ್ ಆಗಿದೆ’ ಎಂದು ಓಲಾ ನೌಕರರು ಹೇಳಿದ್ದರು.

ADVERTISEMENT

ಕ್ಯಾಬ್ ಬುಕ್ ಮಾಡಿದ್ದ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿ ಠಾಣೆಗೆ ಕರೆಸಿಕೊಂಡ ಪೊಲೀಸರು, ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ರಿನ್‌ಸನ್ ನಾಪತ್ತೆಯಲ್ಲಿ ಅವರ ಪಾತ್ರವಿಲ್ಲ ಎಂಬುದು ಖಚಿತವಾದ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದರು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಸ್ನೇಹಿತರು ಹಾಗೂ ಸಂಬಂಧಿಕರನ್ನೆಲ್ಲ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಮೋರಿಯಲ್ಲಿತ್ತು ಶವ: ಭಾನುವಾರ ರಾತ್ರಿ ಹೊಸೂರಿನ ಮೋರಿಯಲ್ಲಿ ಶವವನ್ನು ಕಂಡ ದಾರಿಹೋಕರು, ಕೂಡಲೇ ಸಿಪ್‌ಕಾಟ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಮೃತರ ಅಂಗಿ ಜೇಬಿನಲ್ಲಿದ್ದ ಡಿ.ಎಲ್‌ ನೆರವಿನಿಂದ ಪೊಲೀಸರಿಗೆ ರಿನ್‌ಸನ್‌ ವಿಳಾಸ ಗೊತ್ತಾಗಿದೆ.

ನಂತರ ಅವರು 100ಕ್ಕೆ ಕರೆ ಮಾಡಿ, ಇಲ್ಲಿನ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ದೇವರಜೀವನಹಳ್ಳಿ ಪೊಲೀಸರು ರಿನ್‌ಸನ್‌ ತಂದೆಯನ್ನು ಕರೆದುಕೊಂಡು ಹೊಸೂರಿಗೆ ತೆರಳಿದ್ದಾರೆ. ಸೋಮವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ಮಾಡಿಸಿ ಶವವನ್ನು ತಂದೆಗೆ ಹಸ್ತಾಂತರಿಸಿದ್ದಾರೆ. ಹಂತಕರ ಪತ್ತೆಗೆ ಸಿಪ್‌ಕಾಟ್ ಹಾಗೂ ದೇವರಜೀವನಹಳ್ಳಿ ಪೊಲೀಸರು ‌ಜಂಟಿ ತನಿಖೆ ಶುರು ಮಾಡಿದ್ದಾರೆ.

ಕಾರಿಗಾಗಿ ಹತ್ಯೆ
ರಿನ್‌ಸನ್ ಅವರನ್ನು ಹತ್ಯೆಗೈದ ಬಳಿಕ ಆರೋಪಿಗಳು ಅವರ ಕ್ಯಾಬ್ ತೆಗೆದುಕೊಂಡು ಹೋಗಿದ್ದಾರೆ. ಜ.18ರ ರಾತ್ರಿ ಕ್ಯಾಬ್ ಎಲೆಕ್ಟ್ರಾನಿಕ್‌ಸಿಟಿ ಟೋಲ್‌ಗೇಟ್ ಮಾರ್ಗವಾಗಿ ಹಾದು ಹೋಗಿದ್ದು, ಆ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಎ 51ಎ 5202 ನೋಂದಣಿ ಸಂಖ್ಯೆಯ ಕಾರು ಪತ್ತೆಯಾದರೆ, ಸಾರ್ವಜನಿಕರು 100ಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.