ADVERTISEMENT

`ಹೊಸ ಬಗೆ ಭರವಸೆ ಮೂಡಿಸುವ ಸಾಹಿತ್ಯ'

ಎಚ್.ಎಸ್.ವಿ ಅವರ `ಶಂಖದೊಳಗಿನ ಮೌನ' ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಬೆಂಗಳೂರು: `ನವ್ಯ, ಬಂಡಾಯ, ದಲಿತ ಸೇರಿದಂತೆ ಎಲ್ಲ ಕಾಲಘಟ್ಟಗಳಿಗೂ ಪ್ರತಿಕ್ರಿಯಿಸುತ್ತಲೇ ಬಂದಿರುವ ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರ ಸಾಹಿತ್ಯ ಹೊಸ ಬಗೆಯ ಭರವಸೆಯನ್ನು ಮೂಡಿಸುತ್ತದೆ' ಎಂದು ಕತೆಗಾರ ವಿವೇಕ ಶಾನಭಾಗ ತಿಳಿಸಿದರು.

ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನವು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ `ಶಂಖದೊಳಗಿನ ಮೌನ' ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಮಕ್ಕಳ ಕವಿತೆ, ನಾಟಕ, ಕಾವ್ಯ, ಲೇಖನ ಸೇರಿದಂತೆ ಎಲ್ಲ ಪ್ರಕಾರಗಳನ್ನು ಒಳಗೊಂಡು ವೆಂಕಟೇಶಮೂರ್ತಿ ಅವರ ಸಾಹಿತ್ಯ ಬಹುದೊಡ್ಡ ವಿಸ್ತಾರ ಪಡೆದಿದೆ. ಅಡಿಗರ ಕಾವ್ಯದಂತೆ ಇವರ ಕವಿತೆಗಳಲ್ಲಿರುವ ರೂಪಕಗಳು, ಪ್ರತಿಮೆಗಳು ಓದುಗರನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ' ಎಂದು ಹೇಳಿದರು.

`ಕಾವ್ಯದೊಳಗೆ ಕಥನವನ್ನು ಹೇಳುವ ಬಗೆಯೇ ಒಂದು ಸೋಜಿಗ. ಸಣ್ಣ  ಸಣ್ಣ ಘಟನೆಗಳನ್ನು ವಿವರವಾಗಿ ಬಣ್ಣಿಸುತ್ತಲೇ ಓದುಗರ ಹೃದಯವನ್ನು ಆರ್ದ್ರಗೊಳಿಸುವ ಕೌಶಲ ಅವರಿಗೆ ಲಭಿಸಿದ್ದು,  ಇದು ಕನ್ನಡ ಸಾಹಿತ್ಯಕ್ಕೆ ದಕ್ಕಿರುವ ಹೊಸ ಕಾವ್ಯಪರಂಪರೆ' ಎಂದು ಬಣ್ಣಿಸಿದರು.

`ತನಗಿರುವ ಸಾಮರ್ಥ್ಯ ಹಾಗೂ ಕಂಡುಕೊಳ್ಳಬಹುದಾದ ಸಹೃದಯ ಓದುಗರ ಬಗ್ಗೆ ಕವಿಯಾದವರಿಗೆ ಅರಿವು ಇರಬೇಕು. ವೆಂಕಟೇಶಮೂರ್ತಿ ಅವರ ಕವಿತೆಗಳಲ್ಲಿ ಈ ಅರಿವು ಎದ್ದುಕಾಣುತ್ತದೆ' ಎಂದರು.

ಲೇಖಕ ಕೆ.ಸತ್ಯನಾರಾಯಣ, `ನಲ್ವತ್ತೈದು ವರ್ಷಗಳ ಕಾಲ ಸತತವಾಗಿ ಕಾವ್ಯ ಕೃಷಿಯಲ್ಲಿ ತೊಡಗಿರುವ ಅವರ ಸಾಧನೆ ಇತರರಿಗೆ ಸ್ಫೂರ್ತಿ. ಬಹುತೇಕ ಕವಿತೆಗಳು ಪ್ರಾರ್ಥನೆ ಹಾಗೂ ಹಾರೈಕೆಯೊಂದಿಗೆ ಕೊನೆಗೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯೊಂದು ಕಾವ್ಯದ ಹೆಗಲೇರುವ ಬಗೆಯನ್ನು ತಿಳಿಸುತ್ತದೆ' ಎಂದರು.

ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ತಾಯಿ ಎಚ್.ಎಸ್.ನಾಗರತ್ನಮ್ಮ ಅವರು ಹಾಡಿರುವ `ಮನೆ ಹಾಡುಗಳು'  ಸಿ.ಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪಾಸನಾ ಮೋಹನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.