ADVERTISEMENT

ಹೊಸ ಮುಖಗಳಿಗೆ ಕಾಂಗ್ರೆಸ್‌, ಬಿಜೆಪಿ ಮಣೆ

ವಿಧಾನ ಪರಿಷತ್‍ನ 11 ಸ್ಥಾನಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಹೊಸ ಮುಖಗಳಿಗೆ ಕಾಂಗ್ರೆಸ್‌, ಬಿಜೆಪಿ ಮಣೆ
ಹೊಸ ಮುಖಗಳಿಗೆ ಕಾಂಗ್ರೆಸ್‌, ಬಿಜೆಪಿ ಮಣೆ   

ಬೆಂಗಳೂರು:‌ ವಿಧಾನಸಭೆಯಿಂದ ವಿಧಾನ ಪರಿಷತ್‍ನ 11 ಸ್ಥಾನಗಳಿಗೆ ಜೂನ್‌ 11ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ.

ನಾಮಪತ್ರ ಸಲ್ಲಿಸಲು ಗುರುವಾರ (ಮೇ 31) ಅಂತಿಮ ದಿನವಾಗಿದ್ದು, ವಿಧಾನಸಭೆಯ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ನಾಲ್ಕು, ಬಿಜೆಪಿ ಐದು, ಜೆಡಿಎಸ್‌ ಎರಡು ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ.

11 ಅಭ್ಯರ್ಥಿಗಳಿಗಿಂತ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದರೆ ಚುನಾವಣೆ ನಡೆಯಲಿದೆ.

ADVERTISEMENT

ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ. ಇಬ್ರಾಹಿಂ ಮತ್ತು ಕೆ. ಗೋವಿಂದರಾಜ್ ಅವರಿಗೆ ಕಾಂಗ್ರೆಸ್‌ ಮತ್ತೊಮ್ಮೆ ಅವಕಾಶ ನೀಡಿದೆ.

ಮೂರನೇ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ. ಹರೀಶ್‍ ಕುಮಾರ್, ನಾಲ್ಕನೇ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯದರ್ಶಿ ಅರವಿಂದಕುಮಾರ್ ಅರಳಿ (ಬೀದರ್‌) ಅವರನ್ನು ಆಯ್ಕೆ ಮಾಡಿದೆ. ಈ ಇಬ್ಬರೂ ಹೊಸ ಮುಖಗಳು.

ಆ ಮೂಲಕ, ಮತ್ತೊಮ್ಮೆ ಮೇಲ್ಮನೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಮೋಟಮ್ಮ ಮತ್ತು ರಾಣಿ ಸತೀಶ್‌ ಅವರಿಗೆ ಅವಕಾಶ ಕೈ ತಪ್ಪಿದೆ. ಅಲ್ಲದೆ, ಹಿಂದುಳಿದ ವರ್ಗದ ಕೋಟಾದಲ್ಲಿ ರಾಮಚಂದ್ರಪ್ಪ ಸೇರಿದಂತೆ ಹಲವರಿಗೆ ನಿರಾಸೆಯಾಗಿದೆ.

ಬಿಜೆಪಿಯಲ್ಲಿ ನಾಲ್ಕು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್‌. ಈಶ್ವರಪ್ಪ ಅವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಎಸ್‌. ರುದ್ರೇಗೌಡರಿಗೆ ವಿಧಾನ ಪರಿಷತ್‌ನಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು.

ಎನ್‌. ರವಿಕುಮಾರ್‌ ಎಬಿವಿಪಿ ಹಿನ್ನೆಲೆಯವರಾಗಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕೆ.ಪಿ. ನಂಜುಂಡಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಇವರ ಜೊತೆಗೆ, ಪಕ್ಷದ ವಕ್ತಾರೆ ತೇಜಸ್ವಿನಿ ಗೌಡ ಅವರಿಗೂ ಅವಕಾಶ ಕಲ್ಪಿಸಲಾಗಿದೆ.

ಜೆಡಿಎಸ್‌ನಲ್ಲಿ ಪೈಪೋಟಿ: ಒಂದು ಸ್ಥಾನಕ್ಕೆ ಪಕ್ಷದ ಹಿರಿಯ ಉಪಾಧ್ಯಕ್ಷ ಬಿ.ಎಂ. ಫಾರೂಕ್‌ ಅವರ ಹೆಸರನ್ನು ಬುಧವಾರ ರಾತ್ರಿ ಅಂತಿಮಗೊಳಿಸಿರುವ ಜೆಡಿಎಸ್‌, ಇನ್ನೊಬ್ಬ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಎರಡನೇ ಅಭ್ಯರ್ಥಿಯಾಗಲು ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.