ADVERTISEMENT

ಹೊಸ ರಸ್ತೆ ಅಗೆಯಲು ಅವಕಾಶ ಇಲ್ಲ

ಪೈಪ್‌ಲೈನ್‌ ಅಳವಡಿಕೆಗೆ ಜಲಮಂಡಳಿಯೂ ಆನ್‌ಲೈನ್‌ ಅರ್ಜಿ ಹಾಕಬೇಕು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಬೆಂಗಳೂರು: ‘ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ದುರಸ್ತಿಗೊಳಿಸಿ ಒಂದು ವರ್ಷದವರೆಗೆ ಯಾವ ಕಾರಣಕ್ಕೂ ಅಗೆಯಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ನಿಯಮ ರೂಪಿಸಲಾಗಿದೆ’ ಎಂದು ಬಿಬಿಎಂಪಿಯ ಆಪ್ಟಿಕಲ್‌ ಕೇಬಲ್‌ (ಒಎಫ್‌ಸಿ) ಪರಿಶೀಲನಾ ಸಮಿತಿ ಅಧ್ಯಕ್ಷ ಎನ್‌.ಆರ್‌. ರಮೇಶ್‌ ತಿಳಿಸಿದರು.

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಹೊಸದಾಗಿ ಟಾರು ಹಾಕಲಾದ ರಸ್ತೆಗಳನ್ನು ಎಂತಹ ತುರ್ತು ಕಾರ್ಯವಿದ್ದರೂ ಒಂದು ವರ್ಷದವರೆಗೆ ಅಗೆಯಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೂರ ಸಂಪರ್ಕ ಸಂಸ್ಥೆಗಳು, ಜಲ ಮಂಡಳಿ, ಬೆಸ್ಕಾಂ ಸೇರಿದಂತೆ ಯಾವುದೇ ಸಂಸ್ಥೆ, ಪ್ರಾಧಿಕಾರ ಇಲ್ಲವೆ ಸಾರ್ವಜನಿಕರು ಇನ್ನುಮುಂದೆ ಯಾವುದೇ ಉದ್ದೇಶಕ್ಕಾಗಿ ರಸ್ತೆ ಅಗೆಯಲು ಬಿಬಿಎಂಪಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ರಸ್ತೆ ಅಗೆಯುವ ಪ್ರದೇಶವನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಅರ್ಜಿ ಸಲ್ಲಿಸುವಾಗಲೇ ಗುರುತಿಸಬೇಕು. ತೆಗೆಯುವ ಗುಂಡಿಗಳ ಮಾಹಿತಿಯನ್ನೂ ಒದಗಿಸಬೇಕು. ಆ ರಸ್ತೆಯನ್ನು ಎಂಜಿನಿಯರ್‌ ಪರಿಶೀಲನೆ ನಡೆಸಿ, ಮೊಬೈಲ್‌ನಲ್ಲಿ ತೆಗೆದ ಚಿತ್ರಗಳೊಂದಿಗೆ ಪ್ರಧಾನ ಕಚೇರಿಗೆ ಕಳುಹಿಸುತ್ತಾರೆ. ಆಯುಕ್ತರ ನೇತೃತ್ವದ ಸಮಿತಿ ಏಳು ದಿನಗಳಲ್ಲಿ ಅರ್ಜಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ವಿವರಿಸಿದರು.

‘ಅರ್ಜಿದಾರರಿಗೆ ರಸ್ತೆ ಅಗೆಯಲು ಅನುಮತಿ ನೀಡಿದಾಗ ಅನುಮತಿ ಪತ್ರ ಸಿದ್ಧವಾಗಿ, ಅರ್ಜಿದಾರರ ಇ–ಮೇಲ್‌ಗೆ ರವಾನೆ ಆಗುತ್ತದೆ. ಆನ್‌ಲೈನ್‌ ಮೂಲಕವೇ ಹಣ ಪಾವತಿ ಮಾಡಬೇಕು. ಹಣ ಪಾವತಿಗೆ 33 ಬ್ಯಾಂಕ್‌ಗಳ ಆಯ್ಕೆ ನೀಡಲಾಗಿದೆ’ ಎಂದು ತಿಳಿಸಿದರು. ‘ಜಲಮಂಡಳಿ ಮತ್ತು ಬೆಸ್ಕಾಂ ಹೊರತುಪಡಿಸಿ ಮಿಕ್ಕ ಯಾವುದೇ ಸಂಸ್ಥೆಯಾದರೂ ಅಗೆದವರೇ ರಸ್ತೆಯನ್ನು ದುರಸ್ತಿಗೊಳಿಸಬೇಕು’ ಎಂದು ಅವರು ಸ್ಪಷ್ಟಪಡಿಸಿದರು.

‘ಕಳೆದ ಹತ್ತು ವರ್ಷಗಳಲ್ಲಿ ಬಿಬಿಎಂಪಿ ರಸ್ತೆಗಳ ದುರಸ್ತಿಗಾಗಿ ರೂ 10,782 ಕೋಟಿ ಖರ್ಚು ಮಾಡಿದ್ದು, ಈ ಅವಧಿಯಲ್ಲಿ ಒಎಫ್‌ಸಿ ಮೂಲದಿಂದ ರೂ 58 ಕೋಟಿಯಷ್ಟು ಆದಾಯ ಮಾತ್ರ ಬಂದಿದೆ. 17 ದೂರ ಸಂಪರ್ಕ ಸೇವಾ ಸಂಸ್ಥೆಗಳು (ಒಎಫ್‌ಸಿ), 15 ಅಂತರ್ಜಾಲ ಸೇವಾ ಸಂಸ್ಥೆಗಳು (ಐಎಸ್‌ಪಿ) ನಗರದಲ್ಲಿ ಕೇಬಲ್‌ ಅಳವಡಿಸಿಕೊಂಡಿವೆ’ ಎಂದು ಮಾಹಿತಿ ನೀಡಿದರು.

‘15 ವರ್ಷದ ಅವಧಿಗೆ ಪ್ರತಿ ಮೀಟರ್‌ ಕೇಬಲ್‌ ಅಳವಡಿಕೆಗೆ ರೂ850 ಶುಲ್ಕ ನೀಡಲು ಎಲ್ಲ ದೂರ ಸಂಪರ್ಕ ಸೇವಾ ಸಂಸ್ಥೆಗಳು ಒಪ್ಪಿಕೊಂಡು, ಪತ್ರ ಬರೆದುಕೊಟ್ಟಿವೆ. ಅನಧಿಕೃತವಾಗಿ ಹಾಕಲಾದ ಕೇಬಲ್‌ ಮಾಹಿತಿಯನ್ನು ಅವುಗಳು ಇನ್ನೊಂದು ವಾರದಲ್ಲಿ ನೀಡಲಿದ್ದು, ಮೀಟರ್‌ಗೆ ರೂ 850ರಂತೆ ಶುಲ್ಕ ತುಂಬಿ ಸಕ್ರಮ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ’ ಎಂದು ತಿಳಿಸಿದರು.

‘ಹೊಸ ವ್ಯವಸ್ಥೆ ಜಾರಿಗೆ ಬಂದಿರುವ ಕಾರಣ, ರಸ್ತೆ ಅಗೆದು ಕೇಬಲ್‌ ಅಳವಡಿಸುವ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ. ಅಕ್ರಮವಾಗಿ ಕೇಬಲ್‌ ಅಳವಡಿಸುತ್ತಿರುವ ಸಂಸ್ಥೆಗಳ ವಿರುದ್ಧ 17 ಮೊಕದ್ದಮೆ ದಾಖಲಿಸಲಾಗಿದೆ’ ಎಂದು ಹೇಳಿದರು. ‘ಒಎಫ್‌ಸಿಯಲ್ಲಿ ಆಗುತ್ತಿದ್ದ ಅಕ್ರಮ ತಡೆಗಟ್ಟಿದ್ದರಿಂದ ಬಿಬಿಎಂಪಿಗೆ ಸುಮಾರು ರೂ

720 ಕೋಟಿ ಆದಾಯ ಹರಿದುಬರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಅನಧಿಕೃತ ಕೇಬಲ್‌ ಅಳವಡಿಕೆ ಮಾಹಿತಿಯನ್ನು ಸಮರ್ಪಕವಾಗಿ ನೀಡದಿದ್ದರೆ, ಬಿಬಿಎಂಪಿ ಗುರುತಿಸಿದ ಎಲ್ಲ ಅನಧಿಕೃತ ಕೇಬಲ್‌ ಸಂಪರ್ಕವನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT