ADVERTISEMENT

ಹೊಸ ವ್ಯವಸ್ಥೆಗೆ ಜನರಿಂದ ಮೆಚ್ಚುಗೆ

ಆನ್‌ಲೈನ್‌ ಮೂಲಕ ಜನನ, ಮರಣ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಜಾರಿಗೆ ತಂದಿರುವ ಆನ್‌ಲೈನ್‌ ಮೂಲಕ ಜನನ /ಮರಣ ಪ್ರಮಾಣಪತ್ರ ನೀಡುವ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿ­ಸು­ತ್ತಿದೆ. ಫೆ.1ರಿಂದ ಆರಂಭವಾಗಿರುವ ಹೊಸ ವ್ಯವಸ್ಥೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ನಗರದ 1,480 ಖಾಸಗಿ ಆಸ್ಪತ್ರೆ­ಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ಬಂದಿದೆ. ಜನನ / ಮರಣ ಸಂಭವಿಸಿದ ಆಸ್ಪತ್ರೆಯಲ್ಲೇ ಪ್ರಮಾಣಪತ್ರ ಸಿಗು­ತ್ತಿರು­ವುದರಿಂದ ಬಿಬಿಎಂಪಿ ಕಚೇರಿಗೆ ಅಲೆ­ಯುವ ಅನಿವಾರ್ಯ ತಪ್ಪಿದೆ. ಹೊಸ ವ್ಯವಸ್ಥೆಯಿಂದ ಜನನ / ಮರಣ ಪ್ರಮಾಣಪತ್ರ ಪಡೆಯುವುದು ಸುಲಭವಾಗಿದೆ.

‘ಈ ಹಿಂದೆ ಕುಟುಂಬ ಸದಸ್ಯರ ಜನನ ಅಥವಾ ಮರಣ ಸಂಭವಿಸಿದರೆ ವೈದ್ಯರಿಂದ ದಾಖಲೀಕರಣದ ಪತ್ರ ಪಡೆದು ಅದರೊಂದಿಗೆ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಬೇಕಿತ್ತು. ಈಗ ಖಾಸಗಿ ಆಸ್ಪತ್ರೆಗಳಲ್ಲೇ ಜನನ / ಮರಣ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಪ್ರಮಾಣಪತ್ರಕ್ಕಾಗಿ ಬಿಬಿಎಂಪಿ ಕಚೇರಿಗೆ ಅಲೆಯುವುದು ತಪ್ಪಿದೆ’ ಎಂದು ಇತ್ತೀಚೆಗೆ ತಮ್ಮ ಮಗನ ಜನನ ಪ್ರಮಾಣಪತ್ರ ಪಡೆದ ರಾಜೇಶ್‌ ಹೇಳಿದರು.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕ ಬಿ.ಶಂಕರಪ್ಪ, ‘ಹೊಸ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಸ್ಪಂದನೆ ಉತ್ತಮ­ವಾಗಿದೆ. ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆಯೇ ಹೊರತು ಈವರೆಗೆ ಯಾವುದೇ ದೂರುಗಳು ಬಂದಿಲ್ಲ. ವ್ಯವಸ್ಥೆ ಜಾರಿಯಾದ ಬಳಿಕ 13 ಸಾವಿರ ಜನನ ಪ್ರಮಾಣಪತ್ರ ಹಾಗೂ ಐದು ಸಾವಿರ ಮರಣ ಪ್ರಮಾಣಪತ್ರ ವಿತರಣೆಯಾಗಿದೆ’ ಎಂದು ತಿಳಿಸಿದರು.

ಹೊಸ ವ್ಯವಸ್ಥೆಯ ಬಗ್ಗೆ ದೂರುಗಳೇನಾದರೂ ಇದ್ದರೆ 94806 83189 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬಹುದು.

ಸಮೀಕ್ಷೆಗೆ ಐಐಎಂಬಿ ತಂಡ
ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ನಗರದ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂಬಿ) ತಂಡದಿಂದ ಸಮೀಕ್ಷೆ ನಡೆಸುವ ಚಿಂತನೆ­ ಇದೆ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಹೊಸ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವ ಮಾಹಿತಿ ಫಲಕ ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶ ಪಾಲಿಕೆಯದು.
– ಬಿ.ಶಂಕರಪ್ಪ, ಜಂಟಿ ನಿರ್ದೇಶಕರು, ಸಾಂಖ್ಯಿಕ ವಿಭಾಗ, ಬಿಬಿಎಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.