ಬೆಂಗಳೂರು: `ಪರಿಣಾಮಕಾರಿಯಾದ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಹೋಮಿಯೋಪತಿ ವೈದ್ಯ ಪದ್ಧತಿ ಬಗ್ಗೆ ಸರ್ಕಾರ ಹಾಗೂ ಜನರು ಹೆಚ್ಚು ಆಸಕ್ತಿ ಹೊಂದದಿರುವ ಬೆಳವಣಿಗೆ ಸರಿಯಲ್ಲ~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ವಿಷಾದಿಸಿದರು.
ಕರ್ನಾಟಕ ಹೋಮಿಯೋಪತಿ ಮಂಡಲಿ ಹಾಗೂ ಆಯುಷ್ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಹೋಮಿಯೋಪತಿ ದಿನದ ರ‌್ಯಾಲಿಗೆ ಪುರಭವನದ ಮುಂಭಾಗ ಚಾಲನೆ ನೀಡಿ ಮಾತನಾಡಿದ ಅವರು, `ಎಚ್1ಎನ್1 ನಂಥಾ ರೋಗಗಳಿಗೂ ಹೋಮಿಯೋಪತಿ ವೈದ್ಯ ಪದ್ಧತಿಯ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ.
ಆದರೆ ಸರ್ಕಾರ ಹಾಗೂ ಜನತೆಗೆ ಇನ್ನೂ ಈ ವೈದ್ಯ ಪದ್ಧತಿಯ ಬಗ್ಗೆ ಹೆಚ್ಚು ನಂಬಿಕೆ ಬಂದಿಲ್ಲ. ಸರ್ಕಾರ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು~ ಎಂದು ಅವರು ಅಭಿಪ್ರಾಯಪಟ್ಟರು.
ರ‌್ಯಾಲಿಯಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ.ವೀರಭದ್ರಾಚಾರಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.