ಬೆಂಗಳೂರು: ‘ಮಹಿಳೆಯರು ಇಂದು ಆತ್ಮವಿಶ್ವಾಸ ಮತ್ತು ಧನಾತ್ಮಕ ಯೋಚನೆಯಿಂದ ಸಾಧನೆಯತ್ತ ಮುನ್ನಡೆಯಬೇಕು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್ ಹೇಳಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಹಿಳಾ ಲೆಕ್ಕ ಪರಿಶೋಧಕರ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ದಿನ ನಿತ್ಯವೂ ಅವಳಿಗೆ ಗೌರವವನ್ನು ನೀಡುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಪಿ.ವಿ.ಭಾರತಿ ಮಾತನಾಡಿ, ‘ಇಂದು ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬ್ಯಾಂಕಿಂಗ್, ಹಣಕಾಸು ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದ್ದಾರೆ. ಲೆಕ್ಕ ಪರಿಶೋಧಕರ ಹುದ್ದೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿತ್ತು. ಆದರೆ, ಈಗ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2013 ರಲ್ಲಿ ಮಹಿಳಾ ಲೆಕ್ಕ ಪರಿಶೋಧಕರ ಸಂಖ್ಯೆ ಶೇ 22 ರಷ್ಟಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.