ADVERTISEMENT

‘ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಾಕ್ಷಣ ಇಂಗ್ಲಿಷ್ ಬಾರದು’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2013, 19:42 IST
Last Updated 9 ನವೆಂಬರ್ 2013, 19:42 IST

ಬೆಂಗಳೂರು: ‘ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಾಕ್ಷಣ ಉತ್ತಮ ಇಂಗ್ಲಿಷ್ ಕಲಿಯಲು ಸಾಧ್ಯವಿಲ್ಲ. ಮಾತೃಭಾಷೆಯಲ್ಲಿ ಪರಿಪಕ್ವತೆ ಸಾಧಿಸಿದಾಗ ಮಾತ್ರ ಇತರೆ ಭಾಷೆಗಳನ್ನು ಸಮರ್ಪಕವಾಗಿ ಕಲಿಯಬಹುದು’ ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.

ಪಿಇಎಸ್ ಶಿಕ್ಷಣ ಸಂಸ್ಥೆಗಳು ದತ್ತು ಪಡೆದಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ನಡುವೆ ಬಹುದೊಡ್ಡ ಕಂದಕ ಉಂಟಾಗಿದೆ. ಸರ್ಕಾರ ಕನ್ನಡ ಮಾಧ್ಯಮವನ್ನು ಉಳಿಸಿಕೊಂಡು ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವ ದಿಸೆಯಲ್ಲಿ ಏಕರೂಪಶಿಕ್ಷಣ ವ್ಯವಸ್ಥೆಯನ್ನು ರೂಪುಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಹಾಗೂ ಕನ್ನಡ ಶಾಲೆಗಳಲ್ಲಿರುವ ಮಕ್ಕಳು ಅವಕಾಶವಂಚಿರಾಗದೇ ಇರುವ ಹಾಗೇ ನೋಡಿಕೊಳ್ಳಬೇಕು. ಕೀಳರಿಮೆಯನ್ನು ಬಿತ್ತದೇ ಮೂಲಸೌಕರ್ಯ ಹಾಗೂ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು’ ಎಂದು ಹೇಳಿದರು.

‘ಏಳು ಸಾವಿರ ಭಾಷೆಯಲ್ಲಿ ಕನ್ನಡಕ್ಕೆ 30 ನೇ ಸ್ಥಾನ ದೊರೆತಿದೆ. ಇದು ಕನ್ನಡ ಭಾಷೆಯ ಮಹತ್ವವನ್ನು ಸಾರುತ್ತದೆ. ನಗರದ ಪ್ರದೇಶಗಳೆಲ್ಲವೂ ಕಂಗ್ಲೀಷ್ ಮಯವಾಗುತ್ತಿದ್ದು, ಕನ್ನಡ ಹಾಗೂ ಇಂಗ್ಲಿಷ್ ಎರಡನ್ನು ಪರಿಪೂರ್ಣವಾಗಿ ಕಲಿಯಬೇಕು’ ಎಂದು ಹೇಳಿದರು.

‘ಪ್ರಸ್ತುತ ಅಂತರಜಾಲವು ಎಲ್ಲೆಡೆ ತಿಳವಳಿಕೆಯನ್ನು ಬಿತ್ತುತ್ತಿದೆ. ಹಾಗಾಗಿ ಅಧ್ಯಾಪಕರು ಹೊಸ ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಬೇಕು. ಹಳೆಯ ಮಾರ್ಗವನ್ನು ಬಿಟ್ಟು ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾಗುವಂತೆ ಬೋಧನಾ ಕ್ರಮವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ  ನೀಡಿದರು.

ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ, ‘ ಶಾಸಕರು, ವಿಧಾನಪರಿಷತ್ ಸದಸ್ಯರು ಕನಿಷ್ಠ ಐದು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೇಲ್ಪಂಕ್ತಿ ಹಾಕಿಕೊಡಬೇಕು’ ಎಂದು ಸಲಹೆ  ನೀಡಿದರು.

‘ಮಕ್ಕಳಲ್ಲಿ ಹಿಂದುಳಿದ, ದಲಿತ, ಬ್ರಾಹ್ಮಣರೆಂಬ ಭೇದ ಭಾವವಿರುವುದಿಲ್ಲ. ಪ್ರೇಕ್ಷಣೀಯ ಸ್ಥಳಕ್ಕೆ  ಹೋಗಲು ಹಿಂದುಳಿದ ವರ್ಗಗಳ ಮಕ್ಕಳಿಗೆ ಸರ್ಕಾರ ಅನುದಾನ ಒದಗಿಸಲಿದೆ ಎಂಬ ಮಾಹಿತಿ ಇದೆ. ಆದರೆ ಅದರ ಜತೆ ಇತರೆ ಮಕ್ಕಳು ಕೂಡ ಪ್ರೇಕ್ಷಣಿಯ ಸ್ಥಳಕ್ಕೆ ಹೋಗಲು ಸರ್ಕಾರ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ‘ಏಕಾಗ್ರತೆ ಹಾಗೂ ಸತತ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಏಳಿಗೆ ಸಾಧಿಸಲು ಸಾಧ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.