ADVERTISEMENT

‘ಉದ್ಯೋಗ ವಲಯ– ಮಹಿಳೆಯರ ಸಂಖ್ಯೆ ಕಡಿಮೆ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 20:16 IST
Last Updated 8 ಮಾರ್ಚ್ 2014, 20:16 IST

ಬೆಂಗಳೂರು: ‘ದೇಶದಲ್ಲಿ ಜಾತಿ ಹಾಗೂ ಧರ್ಮ ಲಾಬಿಗಳ ನಡುವೆ ಅಭಿವೃದ್ಧಿಗಾಗಿ ಮಹಿಳೆಯರು ಲಾಬಿ ಮಾಡಬೇಕು’ ಎಂದು ಮಣಿಪಾಲ ಗ್ಲೋಬಲ್‌ ಎಜುಕೇಷನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನದಾಸ್‌ ಪೈ ತಿಳಿಸಿದರು.

ಮಹಿಳಾ ಉದ್ಯಮಿಗಳ ಮಹಾ ಒಕ್ಕೂಟದ ರಾಜ್ಯ ಶಾಖೆಯನ್ನು ಶನಿ­ವಾರ ಉದ್ಘಾಟಿಸಿ ಅವರು ಮಾತ­ನಾಡಿದರು.
‘ಮಹಿಳೆಯರು ಅವಕಾಶಗಳನ್ನು ಪಡೆಯಲು ಹಾಗೂ ಸವಾಲುಗಳನ್ನು ಎದುರಿಸಿ ನಿಲ್ಲಲು ಸ್ವಲ್ಪ ಮಟ್ಟಿಗೆ ಲಾಬಿ ಮಾಡಬೇಕಿದೆ’ ಎಂದು ತಿಳಿಸಿದರು.

‘ಚೀನಾದಲ್ಲಿ ಪುರುಷರಷ್ಟೇ ಸರಿಸ­ಮಾನರಾಗಿ ಮಹಿಳಾ ಉದ್ಯೋಗಿ­ಗಳು ದುಡಿಯುತ್ತಿರುವ­ುದರಿಂದ ಆರ್ಥಿಕ ಅಭಿವೃದ್ಧಿ ಶರವೇಗದಲ್ಲಿ ಸಾಗಿದೆ. ದೇಶದಲ್ಲಿ ಮಹಿಳೆಯರಿಗೆ ಉತ್ತಮ ಶಿಕ್ಷಣ ದೊರೆಯುತ್ತಿದ್ದರೂ, ಉದ್ಯೋಗ ವಲಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ’ ಎಂದು ಪೈ ಹೇಳಿದರು.

‘ಮಹಿಳೆಯರು ಸಂಘಟಿತರಾದಾಗ ಮಾತ್ರ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಸಾಧ್ಯ’ ಎಂದು ಅವರು ನುಡಿದರು.
ಬಿ–ಪ್ಯಾಕ್‌ನ ರೇವತಿ ಅಶೋಕ್‌, ‘ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಸಮಸ್ಯೆಗಳು ವಿಭಿನ್ನವಾಗಿದ್ದು, ಅವುಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.