ADVERTISEMENT

‘ಕನಕದಾಸರ ಬಗ್ಗೆ ನಡೆಯದ ಅಧ್ಯಯನ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2015, 19:33 IST
Last Updated 4 ಡಿಸೆಂಬರ್ 2015, 19:33 IST

ಬೆಂಗಳೂರು: ಪುರಂದರ ದಾಸರ ಬಗ್ಗೆ ನಡೆದ ವ್ಯಾಖ್ಯಾನ ಹಾಗೂ ಅಧ್ಯಯನ ಕನಕದಾಸರ ಕುರಿತು ನಡೆದಿಲ್ಲ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಸ್ತಕ ಮೇಳ–2015 ಉದ್ಘಾಟನಾ ಸಮಾರಂಭದಲ್ಲಿ ದಾಸ ಸಾಹಿತ್ಯ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ‘ಮಾನವೀಯತೆಯ ಮೇರುಶಿಖರ ಕನಕದಾಸರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪುರಂದರದಾಸರು ಹಾಗೂ ಕನಕದಾಸರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಅವರನ್ನು ಹೊರತುಪಡಿಸಿ ದಾಸ ಸಾಹಿತ್ಯವನ್ನು ನೋಡಲು ಸಾಧ್ಯವಿಲ್ಲ. ಕನಕದಾಸರ ಜೀವನ, ಸಾಧನ ಕ್ರಮ, ದರ್ಶನದ ನೆಲೆಯನ್ನು ಪಾರ್ಥಸಾರಥಿ ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಮಲ್ಲೇಪುರಂ ಅವರು ಹೇಳಿದರು.

ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ, ‘ಪುಸ್ತಕಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ’ ಎಂದರು. ಅರಳುಮಲ್ಲಿಗೆ ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಿಗೆ ಸನ್ಮಾನ: ಇತಿಹಾಸ ತಜ್ಞ ಸುರೇಶ್‌ ಮೂನ, ಸಾಹಿತಿ ಸತ್ಯೇಶ್‌ ಎನ್‌.ಬೆಳ್ಳೂರ್‌, ಪತ್ರಕರ್ತ ಬಿ.ಗಣಪತಿ, ಸಮಾಜ ಸೇವಕ ವಿ.ರಾಮರಾಜು ಅವರನ್ನು ಸನ್ಮಾನಿಸಲಾಯಿತು.

13ರವರೆಗೆ ಮೇಳ: ಶುಕ್ರವಾರದಿಂದ ಆರಂಭವಾಗಿರುವ ಪುಸ್ತಕ ಮೇಳ ಡಿ.13ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ಅನುಮತಿ ನಿರಾಕರಣೆಗೆ  ಬೇಸರ: ‘ಈ ಪುಸ್ತಕ ಮೇಳ ರಾಜಾಜಿನಗರದ ರಾಮಮಂದಿರದಲ್ಲಿ ನಡೆಯಬೇಕಿತ್ತು. ಅಲ್ಲಿ ಮೇಳ ನಡೆಸುವಂತೆ ನಾನು ಸಹ ಶಿಫಾರಸು ಮಾಡಿದ್ದೆ. ಆದರೆ, ಹತ್ತು ದಿನಗಳವರೆಗೆ ಅವಕಾಶ ನೀಡುವುದಿಲ್ಲವೆಂದು ನಗರ ಜಂಟಿ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ’ ಎಂದು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.