ADVERTISEMENT

‘ಕನ್ನಡಿಗರಿಗೆ ಸ್ವಾಭಿಮಾನ ಕಡಿಮೆ–ಅನುಕರಣೆ ಜಾಸ್ತಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:02 IST
Last Updated 20 ಸೆಪ್ಟೆಂಬರ್ 2013, 20:02 IST
ನಗರದ ಸಪ್ನ ಬುಕ್‌ ಹೌಸ್‌ನಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು. ಕತೆಗಾರ ವಿವೇಕ ಶಾನಭಾಗ, ಕೃತಿಯ ಅನುವಾದಕ ಎಸ್‌.ಆರ್‌.ರಾಮಕೃಷ್ಣ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನಗರದ ಸಪ್ನ ಬುಕ್‌ ಹೌಸ್‌ನಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು. ಕತೆಗಾರ ವಿವೇಕ ಶಾನಭಾಗ, ಕೃತಿಯ ಅನುವಾದಕ ಎಸ್‌.ಆರ್‌.ರಾಮಕೃಷ್ಣ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡಿಗರಿಗೆ ಸ್ವಾಭಿಮಾನ ಕಡಿಮೆ, ಅನುಕರಣೆ ಜಾಸ್ತಿ’ ಎಂದು ಕವಿ ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.
ದಿ ಕಾರವಾನ್‌, ನವಯಾನ ಹಾಗೂ ಸಪ್ನ ಬುಕ್‌ ಹೌಸ್‌ ಆಶ್ರಯದಲ್ಲಿ ನಗರದ ಸಪ್ನ ಬುಕ್‌ ಹೌಸ್‌ನಲ್ಲಿ ಶುಕ್ರ ವಾರ ನಡೆದ ಸಂವಾದ ಕಾರ್ಯ ಕ್ರಮ ದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಅವರ  ‘ಊರು ಕೇರಿ’ ಆತ್ಮಕತೆಯ ಇಂಗ್ಲಿಷ್ ಅನುವಾದ ‘ಎ ವರ್ಡ್ ವಿತ್‌ ಯು, ವರ್ಲ್ಡ್’ ಕೃತಿ ಬಿಡುಗಡೆ ಗೊಂಡಿತು.

‘ಕನ್ನಡ ಸಾಹಿತ್ಯ, ಸಂಸ್ಕೃತಿ ಶ್ರೀಮಂತ ವಾದುದು. ಕನ್ನಡಿಗರು ಅದನ್ನು ಬೇರೆ ಭಾಷೆಯವರಿಗೆ ತಿಳಿಸುವ ಕೆಲಸ ಮಾಡು ತ್ತಿಲ್ಲ. ಅನ್ಯ ಭಾಷಿಕರೊಡನೆ ಅವರ ಭಾಷೆ ಯಲ್ಲೇ ನಾವು ಮಾತನಾಡುತ್ತೇವೆ. ಹೀಗಾಗಿ ಕನ್ನಡ ಅಲ್ಪಸಂಖ್ಯಾತ ಭಾಷೆ ಆಗುತ್ತಿದೆ’ ಎಂದು ಬೇಸರಿಸಿದರು.

‘ಇಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಯಲು ಆಸಕ್ತಿ ಇದೆ. ಆದರೆ, ನಮಗೆ ಕಲಿಸುವ ಉತ್ಸಾಹ ಇಲ್ಲ. ಈ ಹಿಂದೆ ಕನ್ನಡ ಕಲಿಕೆ ಶಿಬಿರದಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರು, ‘ನಾನಿನ್ನು ಯಾರ ಜೊತೆಗೆ ಕನ್ನಡ ಮಾತನಾಡಲಿ’ ಎಂದು ಪ್ರಶ್ನಿಸಿದ್ದರು’ ಎಂದು ನೆನಪಿಸಿಕೊಂಡರು.

ತಮಾಷೆಯಿಂದ ಕಂಡೆ: ‘ಒಂದು ಘಟನೆಯನ್ನು ಹಲವಾರು ದೃಷ್ಟಿಕೋನ ದಿಂದ ನೋಡಬಹುದು.  ನನಗೆ ಅವ ಮಾನವಾದಾಗ, ಕಷ್ಟ ಬಂದಾಗ ಘಟನೆಯನ್ನು ತಮಾಷೆಯಿಂದ ಕಾಣ ಲಾರಂಭಿಸಿದೆ. ತಂದೆಯಿಂದ ವಿನಯ, ತಾಯಿಯಿಂದ ಹಾಸ್ಯ ಪ್ರಜ್ಞೆ ಬೆಳೆಸಿ ಕೊಂಡೆ’ ಎಂದರು.

‘ಚಿಕ್ಕಂದಿನಲ್ಲಿ ಹಸಿವಿನಿಂದ ಕಂಗೆಟ್ಟಿದ್ದೆ. ಉತ್ತಮ ಊಟ ಸಿಕ್ಕಿದ್ದು ಹಾಸ್ಟೆಲ್‌ ಸೇರಿದ ಮೇಲೆಯೇ.  ಊಟಕ್ಕೋಸ್ಕರವೇ ನಾನು ಓದಿದ್ದು’ ಎಂದರು.

‘ನನ್ನ ಕಾವ್ಯಗಳಲ್ಲಿ ಕಾಣುವ ಆಕ್ರೋಶ ಊರು ಕೇರಿ ಆತ್ಮಕತೆಯಲ್ಲಿ ಇಲ್ಲ. ಕಾವ್ಯ ಗಳನ್ನು ಮೆರವಣಿಗೆಯಲ್ಲಿ ಆಕ್ರೋಶ, ಆವೇಶದಿಂದ ಹಾಡಲು ಅನುವಾಗು ವಂತೆ ರಚಿಸಿದ್ದೆ. ಸಮಾಧಾನದಿಂದ, ಯಾರನ್ನೂ ದೂಷಣೆ ಮಾಡದೆ ಅನುಭವಕ್ಕೆ ಬಂದುದ್ದನ್ನು ಅಂತಃಸಾಕ್ಷಿಗೆ ಅನುಗುಣವಾಗಿ ಗದ್ಯ ರಚಿಸಿದೆ’ ಎಂದು ಅವರು ಸ್ಮರಿಸಿಕೊಂಡರು.

ಕತೆಗಾರ ವಿವೇಕ ಶಾನಭಾಗ ಸಂವಾದ ನಡೆಸಿ, ‘ಈ ಆತ್ಮಕತೆ ಓದುವಾಗ ಓದುಗರಲ್ಲಿ ನಗು ಹಾಗೂ ಕಣ್ಣೀರು ತರಿಸುತ್ತದೆ. ಇದು ಕೃತಿಯ ವೈಶಿಷ್ಟ್ಯ’ ಎಂದರು. ಕೃತಿಯ ಅನುವಾದಕ ಎಸ್‌.ಆರ್‌.ರಾಮಕೃಷ್ಣ ಹಾಜರಿದ್ದರು.

ಸಾಲು ನನ್ನದು- ಹೆಸರು ಕುವೆಂಪು ಅವರದ್ದು!
ಅದೊಂದು ಚರ್ಚಾಗೋಷ್ಠಿ. ನಾನು ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ. ಡಿ.ಆರ್‌. ನಾಗರಾಜ್‌ ಬಿ.ಎ. ವಿದ್ಯಾರ್ಥಿಯಾಗಿದ್ದರು. ಇಬ್ಬರೂ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆವು. ಕಾಲೇಜು ಪ್ರಾಧ್ಯಾಪಕರು ತೀರ್ಪುಗಾರರಾಗಿದ್ದರು. ತೀರ್ಪುಗಾರರನ್ನು ಕಂಗಾಲು ಮಾಡಲು ಉಪಾಯ ಹೂಡಿದೆ. ನನ್ನ ಹಾಡಿನ ಸಾಲುಗಳನ್ನು ಹಾಡಿ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಎಂದು ಭಾಷಣದ ವೇಳೆ ಉಲ್ಲೇಖಿಸಿದೆ. ನನಗೆ ಬಹುಮಾನ ಬಂತು. ಸ್ಪರ್ಧೆ ಮುಗಿದ ಬಳಿಕ ಡಿ.ಆರ್. ಕಾಯುತ್ತಾ ನಿಂತಿದ್ದರು.

‘ಕುವೆಂಪು ಅವರ ಕೃತಿಗಳಲ್ಲಿ ನೀವು ಹೇಳಿದ ಸಾಲುಗಳನ್ನು ನಾನು ಓದಿಲ್ಲ. ನನಗೂ ತೋರಿಸಿ’ ಎಂದರು. ನಾನು ವಾಸ್ತವ ಸಂಗತಿಯನ್ನು ಬಹಿರಂಗಪಡಿಸಿದೆ. ನಾನು ಬರೆದುದನ್ನು ಓದಿ ಬಹಳ ಸಂತೋಷ ಪಟ್ಟರು. ಮುಖ್ಯವಾಗಿ ನನ್ನ ಸಾಹಿತ್ಯ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಿದವರು ಡಿ.ಆರ್‌.  ಎಂದು ಸಿದ್ದಲಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.