ADVERTISEMENT

‘ಕಿರಿಯರನ್ನು ಬೆಳೆಸಿದ ಮಾಸ್ತಿ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2015, 20:12 IST
Last Updated 6 ಜೂನ್ 2015, 20:12 IST

ಬೆಂಗಳೂರು: ‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಸಾಹಿತ್ಯ ಲೋಕದ ಬಹುದೊಡ್ಡ ಚೇತನ. ಅವರು ತಮ್ಮ ಜತೆಗೆ ಕಿರಿಯ ಲೇಖಕರನ್ನು ಬೆಳೆಸಿದರು’ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.

ಮಾಸ್ತಿ ಅಧ್ಯಯನ ಪೀಠ ಮತ್ತು ಎಂವಿಜೆಕೆ ಟ್ರಸ್ಟ್‌ ವತಿಯಿಂದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಾಚೀನ ಕನ್ನಡ ಸಾಹಿತ್ಯ: ಮಾಸ್ತಿ ಅವರ ವಿಮರ್ಶೆ, ವಿದ್ವತ್ತೆಯ ಕೆಲಸಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮಾಸ್ತಿ ಅವರು ಸಣ್ಣ ಕತೆಗಾರ, ನಾಟಕಕಾರ, ಕಾದಂಬರಿಕಾರ ಜತೆಗೆ ಬಹುಭಾಷಾ ಪಂಡಿತರಾಗಿದ್ದರು. ಬೇರೆ ಪತ್ರಿಕೆಗಳಲ್ಲಿ ತಿರಸ್ಕೃತವಾದ ಕಿರಿಯ ಲೇಖಕರ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದರು’ ಎಂದರು.

‘ಸೃಜನಶೀಲ ಸಾಹಿತಿಯಾದ ಮಾಸ್ತಿ,  ಪ್ರಾಚೀನ–ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಬಹುವಾಗಿ ಪ್ರೀತಿಸಿದರು. ಯಾವುದೇ ವಿಷಯದ ಕುರಿತು ಅವರು  ತೇಲಿಕೆಯ ಹೇಳಿಕೆ ನೀಡುತ್ತಿರಲಿಲ್ಲ. ಕುಮಾರವ್ಯಾಸ ಭಾರತದ ಪರಿಷ್ಕರಣೆಯಲ್ಲಿ ಮಾಸ್ತಿ ಅವರು ಬಹುದೊಡ್ಡ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಹಾಸ್ಯ ಸಾಹಿತಿ ಪ್ರೊ.ಅ.ರಾ.ಮಿತ್ರ ಮಾತನಾಡಿ, ‘ಮಾಸ್ತಿ ಬದುಕಿನ ಸ್ವಚ್ಛತೆ ಕಡೆಗೆ ಹೆಚ್ಚು ಗಮನ  ಕೊಟ್ಟವರು.  ಸದಾ ಒಳ್ಳೆಯದನ್ನು ಬಯಸುತ್ತಿದ್ದರು’ ಎಂದರು. ಕಾರ್ಯಕ್ರಮದಲ್ಲಿ ಅ.ರಾ.ಮಿತ್ರ ಅವರ ‘ಹಂಸ–ಕಾಗೆ’, ‘ನೀತಿವಂತ ಹುಲಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.