ಬೆಂಗಳೂರು: ‘ನಗರದ ಕೆರೆಗಳೆಲ್ಲ ಕಾಣೆಯಾದ ಬಳಿಕ ಸರ್ಕಾರ ಅವುಗಳ ರಕ್ಷಣೆಗೆ ಸಮಿತಿ ರಚಿಸಿದೆ’ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಕೆ.ಎಂ. ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರಹಳ್ಳಿ ಹೋಬಳಿಯ ವೆಂಕಟರಾಯನ ಕೆರೆ ಪಾತ್ರದಲ್ಲಿ ನಿರ್ಮಿಸಿದ ಬಡಾವಣೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಮಾಹಿತಿ ಅರ್ಜಿ ವಿಚಾರಣೆ ಕಾಲಕ್ಕೆ ಗುರುವಾರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಬಡಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಹಶೀಲ್ದಾರರಿಂದ ಮಾಧ್ಯಮ ಪ್ರತಿನಿಧಿಯೊಬ್ಬರು ಮಾಹಿತಿ ಕೇಳಿದ್ದರು. ಅಲ್ಲಿಂದ ಯಾವುದೇ ಮಾಹಿತಿ ಸಿಗದ ಕಾರಣ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತರು, ‘ಕೆರೆ ಪಾತ್ರದಲ್ಲಿ ನಿವೇಶನ ನೀಡುವ ಮೂಲಕ ಜನರನ್ನು ವಂಚಿಸಲಾಗಿದೆ’ ಎಂದೂ ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಿಡಿಎ ಮಂಡಳಿಯಿಂದ ಒಪ್ಪಿಗೆ ಸಿಗದಿದ್ದರೂ 2004ರಲ್ಲಿ 130 ನಿವೇಶನಗಳನ್ನು ನಿರ್ಮಿಸಿ, ಮಾರಾಟ ಮಾಡಿತ್ತು. ಆ ಪ್ರದೇಶ ಕೆರೆ ಪಾತ್ರವಾಗಿತ್ತು ಎಂದು ಹಲವರು ದೂರಿದ್ದರು. ಈ ಕುರಿತಂತೆ ಮಾಹಿತಿ ಕೇಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.