ADVERTISEMENT

‘ಗಾಂಧಿ ತತ್ವಗಳ ಶ್ರೇಷ್ಠ ಪ್ರತಿಪಾದಕ ಮಂಡೇಲಾ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:40 IST
Last Updated 18 ಡಿಸೆಂಬರ್ 2013, 19:40 IST

ಬೆಂಗಳೂರು: ‘ನೆಲ್ಸನ್‌ ಮಂಡೇಲಾ ಅವರು ಗಾಂಧೀಜಿಯ ತತ್ವಗಳ ಶ್ರೇಷ್ಠ ಪ್ರತಿಪಾದಕರಾಗಿ­ದ್ದರು’ ಎಂದು ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಹೇಳಿದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬುಧವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ನೆಲ್ಸನ್‌ ಮಂಡೇಲಾ ಅವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ನಾನು ಕಾನೂನು ಸಚಿವನಾಗಿದ್ದಾಗ ದಕ್ಷಿಣ ಆಫ್ರಿಕಾಕ್ಕೆ ಭೇಟಿ ಮಾಡುವ ಅವಕಾಶ ಲಭಿಸಿತ್ತು. ಆಗ ಅವರು ಸೆರೆವಾಸದಲ್ಲಿದ್ದರು. ಅಲ್ಲಿಗೇ ಹೋಗಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿ­ದಾಗ ಭೇಟಿ ಮಾಡುವ ಅವಕಾಶ ಲಭಿಸಿತು. ಆಗ ಅವರು ಸತ್ಯಾಗ್ರಹವನ್ನು ಮಾಡುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಸೆರೆಮನೆಯಲ್ಲಿ ಭೇಟಿ ಮಾಡಿದಾಗ ಅವರು ಗಾಂಧೀಜಿಯ ತತ್ವಗಳಾದ ಸತ್ಯ, ಶಾಂತಿ ಮತ್ತು ಅಹಿಂಸೆಯಿಂದ ಕಪ್ಪು ಜನರಿಗೆ ನ್ಯಾಯವನ್ನು ದೊರಕಿಸಿ­ಕೊಡಲು ಹೋರಾಟವನ್ನು ಆರಂಭಿಸಿ­ದ್ದರು. ಈ ಹೋರಾಟ ಬಿಳಿಯರ ವಿರುದ್ಧವಲ್ಲ, ಅಸಮಾನತೆಯ ವಿರುದ್ಧ ಎಂದು ಅಂದು ಅವರು ನುಡಿದಿದ್ದರು’ ಎಂದರು.

‘ಬೇರೆ ದೇಶದವರು ಗಾಂಧೀಜಿಯವ­ರನ್ನು ಅನುಕರಿಸುತ್ತಾರೆ. ಆದರೆ, ನಮ್ಮ ದೇಶದಲ್ಲಿಯೇ ಮರೆತಿದ್ದೇವೆ’ ಎಂದು ವಿಷಾದಿಸಿದರು.
‘ಗಾಂಧೀಜಿಯವರು ಹಿಂಸೆಯನ್ನು ಪ್ರೋತ್ಸಾಹಿ­ಸಲಿಲ್ಲ. ಭಗತ್‌ ಸಿಂಗ್‌, ರಾಜಗುರು, ಸುಖದೇವ್‌ ಕ್ರಾಂತಿಕಾರಿ ಮಾರ್ಗವನ್ನು ಆಯ್ದು­ಕೊಂಡರು. ಆದರೆ, ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯದಿಂದ ಮಾತ್ರ ಸ್ವಾತಂತ್ರ್ಯ­ವನ್ನು ಪಡೆಯಲು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು’ ಎಂದರು.

‘ಇಂದು ಜಾತಿ, ಧರ್ಮದ ಹೆಸರಿನಲ್ಲಿ  ಸಮಾಜ­ವನ್ನು ಒಡೆಯುವ ಹುನ್ನಾರವು ನಡೆ­ಯುತ್ತಿದೆ. ಆದರೆ, ಗಾಂಧೀಜಿ­ಯವರು ಎಂದಿಗೂ ಹಿಂದೂ, ಮುಸ್ಲಿಂ ಅವರ ನಡುವೆ ಭೇದವನ್ನು ಎಣಿಸಲಿಲ್ಲ. ಅವರು ಎಂದಿಗೂ ಬೇರ್ಪಡಿಸಲು ಇಷ್ಟಪಡಲಿಲ್ಲ’ ಎಂದು ಹೇಳಿದರು.
‘ಇಂದಿನ ವಿದ್ಯಾರ್ಥಿಗಳು ಜವಾಹರ­ಲಾಲ್‌ ನೆಹರು, ಗಾಂಧೀಜಿ, ಅಂಬೇಡ್ಕರ್‌ ಅವರನ್ನು ನೆನಪಿಸಿಕೊಳ್ಳು­ವುದಿಲ್ಲ. ಗಾಂಧೀಜಿ ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ­ವಾಗಿವೆ. ಅವರ ಆದರ್ಶಗಳನ್ನು ಎಲ್ಲ ತರುಣರು ಪಾಲಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್‌ ಸಚಿವ ಎಚ್‌.ಕೆ.­ಪಾಟೀಲ್‌ ಮಾತನಾಡಿ, ‘ಜಗತ್ತಿಗೆ ಮತ್ತೊಮ್ಮೆ ಗಾಂಧೀಜಿ ಅವರ  ತತ್ವ ಆದರ್ಶಗಳನ್ನು ಸಾರಿದವರು ನೆಲ್ಸನ್‌ ಮಂಡೇಲಾ ಅವರು. ಮಾನವೀಯ ಅನುಕಂಪವನ್ನು ಹೊಂದಿದ್ದ ಅವರ ಗುಣ ಎಲ್ಲರಿಗೂ ಆದರ್ಶಪ್ರಾಯ­ವಾದುದು’ ಎಂದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮಾತ­ನಾಡಿ, ‘ಗಾಂಧೀಜಿ ಮೊದಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದಾಗ ­ಎಂ.ಕೆ.ಗಾಂಧಿ ಆಗಿದ್ದವರು ದೇಶಕ್ಕೆ ಮರಳುವಾಗ ಮಹಾತ್ಮರಾಗಿದ್ದರು. ಗಾಂಧೀಜಿಯವರ ಅದೇ ದಾರಿಯಲ್ಲಿ ನಡೆದ ನೆಲ್ಸನ್‌ ಮಂಡೇಲಾ ಅವರು ಮಾನವೀಯತೆಯ ಮೂರ್ತಿಯಾಗಿದ್ದರು’ ಎಂದರು.

‘ಅವರನ್ನು ಸೆರೆಮನೆಗೆ ದೂಡಿದವರ ವಿರುದ್ಧ ಪ್ರತೀಕಾರವನ್ನು ತೆಗೆದು­ಕೊಳ್ಳದೆ, ಅವರು ಅಧ್ಯಕ್ಷ­ರಾಗಿದ್ದಾಗ ಕ್ಷಮಾಪಣೆ ನೀಡಿ ಮಾನವೀಯತೆ ಮೆರೆದ ಆದರ್ಶ ವ್ಯಕ್ತಿ’ ಎಂದರು.

ಸರ್ಕಾರದಿಂದ ಒಳ್ಳೆಯ ಕೆಲಸ
‘ರಾಜ್ಯದ ಮುಖ್ಯಮಂತ್ರಿ, ಸಚಿವ­ರು ಒಳ್ಳೆಯ ಕಾರ್ಯವನ್ನು ಮಾಡುತ್ತಿ­ದ್ದಾರೆ. ರಾಜ್ಯದ ಆಡಳಿತವು ನನಗೆ ಸಂತಸ ನೀಡಿದೆ. ಹೊಸ ಸರ್ಕಾರ ಆಗಿರುವುದರಿಂದ, ಎಲ್ಲ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಸಮಯ ಬೇಕಾಗುತ್ತದೆ. ನಾನು ಅವರಿಗೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಸೂಚನೆ ನೀಡುವುದಿಲ್ಲ. ಸರ್ಕಾರವನ್ನು ಜನರು ಆರಿಸಿದ್ದಾರೆ. ಜನರ ಆಶೋತ್ತರಗಳಂತೆ ಸರ್ಕಾರ ಕೆಲಸವನ್ನು ಮಾಡಬೇಕು’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.