ADVERTISEMENT

‘ಜನತಾ ದರ್ಬಾರ್‌’ಗೆ ನೂಕು ನುಗ್ಗಲು

ಕಾಲ್ತುಳಿತದ ಭೀತಿಯಿಂದ ಕಾರ್ಯಕ್ರಮ ಮುಂದೂಡಿದ ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ನವದೆಹಲಿ (ಪಿಟಿಐ): ‘ಆಮ್‌ ಆದ್ಮಿ’ ಪಕ್ಷದ ಬಹುಚರ್ಚಿತ ಮೊದಲ ‘ಜನತಾ ದರ್ಬಾರ್‌’ಗೆ ಶನಿವಾರ ಜನಸಾಗರ ಹರಿದು ಬಂದು ಗೊಂದಲ ಮತ್ತು ಅವ್ಯವಸ್ಥೆ ಉಂಟಾಗಿದ್ದರಿಂದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮಧ್ಯದಲ್ಲೇ ಸ್ಥಳ ಬಿಟ್ಟು ತೆರಳಿದರು.

ಅಹವಾಲು ಸಲ್ಲಿಸಲು ಭಾರಿ ಸಂಖ್ಯೆಯಲ್ಲಿ ಇಲ್ಲಿನ ದೆಹಲಿ ಸಚಿವಾಲಯಕ್ಕೆ ಜನ ಬಂದಿದ್ದರಿಂದ ಗೊಂದಲ ಉಂಟಾಗಿತ್ತು. ಕಾಲ್ತುಳಿತದ ಭೀತಿಯಿಂದ ಕಾರ್ಯಕ್ರಮ ಮುಂದೂಡಲಾಯಿತು.

‘ಸದ್ಯ ಎಲ್ಲರೂ ನಿಮ್ಮ ಮನೆಗಳಿಗೆ ಹೋಗಿ. ವ್ಯವಸ್ಥೆಯನ್ನು ಸರಿಪಡಿಸಲು ಕಾಲಾವಕಾಶ ನೀಡಿ. ನಿಮ್ಮ ಎಲ್ಲ ಕುಂದುಕೊರತೆಗಳನ್ನು ಆಲಿಸುತ್ತೇವೆ. ಮುಂದಿನ ಬಾರಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಉತ್ತಮ ವ್ಯವಸ್ಥೆ ಮಾಡುತ್ತೇವೆ’ ಎಂದು ಎರಡನೇ ಬಾರಿಗೆ ಸ್ಥಳಕ್ಕೆ ಬಂದಿದ್ದ ಕೇಜ್ರಿವಾಲ್‌ ಅವರು ಸಚಿವಾಲಯದ ಕಾಂಪೌಂಡ್‌ ಗೋಡೆ ಮೇಲೆ ನಿಂತು ಜನರಲ್ಲಿ ಮನವಿ ಮಾಡಿದರು.

‘ಬೆಳಿಗ್ಗೆ 9ರಿಂದ 11.30ರ ವರೆಗೆ ಮಾತ್ರ ಕುಂದುಕೊರತೆ ಆಲಿಸಲಾಗುವುದು ಎಂದು ಸಮಯ ಗೊತ್ತುಪಡಿಸಿದ್ದರಿಂದ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಗೊಂದಲ ಸೃಷ್ಟಿಯಾಗಿ­ದ್ದರಿಂದ ಮುಂದೂಡಲಾಗಿದೆ ಹೊರತೂ ಸಭೆ­ಯನ್ನು ರದ್ದುಪಡಿಸಿಲ್ಲ’ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಜನ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗಿ ಬಂದದ್ದರಿಂದ ಸುರಕ್ಷತೆ ದೃಷ್ಟಿಯಿಂದ ಪೋಲಿಸರು ಕೇಜ್ರಿವಾಲ್‌ ಅವರನ್ನು  ಸ್ಥಳದಿಂದ ಬಿಗಿ ಭದ್ರತೆಯಲ್ಲಿ ಅವರ ಕಚೇರಿಗೆ ಕೊಂಡೊಯ್ದರು.

ಜನರ ಅಹವಾಲನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಕೇಜ್ರಿವಾಲ್‌ ಅವರು ‘ಜನತಾ ದರ್ಬಾರ್‌’ ಆಯೋಜಿಸಿದ್ದರು. ದೆಹಲಿ ಸಚಿವಾಲಯದ ಹೊರಗಡೆ ಆಯೋಜಿಸಿದ್ದ ಸಭೆ­ಯಲ್ಲಿ ದೆಹಲಿಯ ಎಲ್ಲ ಸಚಿವರು ಹಾಜರಿದ್ದರು.

‘ಜನರು ಲಿಖಿತ ದೂರು ಕೊಟ್ಟಿದ್ದಾರೆ. ಇದೊಂದು ಒಳ್ಳೆಯ ಪ್ರಯೋಗ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ನಡೆಯಬೇಕು’ ಎಂದು ದೆಹಲಿ ಕಾನೂನು ಸಚಿವ ಸೋಮನಾಥ್‌ ಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಕಿರಣ್‌ ಬೇಡಿ ಟೀಕೆ
ದೆಹಲಿ ಸಚಿವಾಲಯದ ಪರಿಸರ­ದಲ್ಲಿ ‘ಜನತಾ ದರ್ಬಾರ್‌’ ನಡೆಸಿದ್ದ ದೆಹಲಿ ಮುಖ್ಯ­ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಕ್ರಮವನ್ನು ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಕಟುವಾಗಿ ಟೀಕಿಸಿದ್ದಾರೆ.

‘ಕೇಜ್ರಿವಾಲ್‌ ಮತ್ತು ಅವರ ತಂಡ ಕಾಲಾವ­ಕಾಶ ತೆಗೆದು­ಕೊಂಡು ನಿಧಾನವಾಗಿ ಜನರ ಸಮಸ್ಯೆ ಆಲಿಸಿ, ಸೂಕ್ತ ನಿರ್ಧಾರಕ್ಕೆ ಬರಬೇಕು’ ಎಂದು ಅವರು ಸಲಹೆ ಮಾಡಿದ್ದಾರೆ.

ಝಡ್‌ ಶ್ರೇಣಿ ಭದ್ರತೆ
ಲಖನೌ (ಐಎಎನ್‌ಎಸ್‌):
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಝಡ್‌ ಶ್ರೇಣಿ ಭದ್ರತೆ ಒದಗಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ದೆಹಲಿಗೆ ಹೊಂದಿಕೊಂಡಿರುವ ಗಾಜಿಯಾ­ಬಾದ್‌ನ ಕೌಶಂಬಿಯಲ್ಲಿ ವಾಸವಿರುವ ಕೇಜ್ರಿವಾಲ್‌ ಅವರಿಗೆ ಭದ್ರತೆ ಒದಗಿಸುವುದಕ್ಕೆ ಗೃಹ ಸಚಿವಾಲಯದ ಸಮಿತಿ ಸಮ್ಮತಿ ಸೂಚಿಸಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.