ADVERTISEMENT

‘ಜಾತಿ ರಾಜಕೀಯ ಅಮಾನವೀಯ’

ವಿದ್ಯಾರ್ಥಿ ರೋಹಿತ್‌ ವೇಮುಲ ಸಾವು ಪ್ರಕರಣ: ಬರಗೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2016, 20:28 IST
Last Updated 24 ಜನವರಿ 2016, 20:28 IST
ರಾಷ್ಟ್ರೀಯ ರಂಗೋತ್ಸವದಲ್ಲಿ ಭಾನುವಾರ ಬೀದಿ ನಾಟಕೋತ್ಸವಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳನ್ನು ಬರಗೂರು ರಾಮಚಂದ್ರಪ್ಪ, ಬಿ.ಆರ್. ಮಂಜುನಾಥ್‌ ವೀಕ್ಷಿಸಿದರು                              -ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ರಂಗೋತ್ಸವದಲ್ಲಿ ಭಾನುವಾರ ಬೀದಿ ನಾಟಕೋತ್ಸವಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳನ್ನು ಬರಗೂರು ರಾಮಚಂದ್ರಪ್ಪ, ಬಿ.ಆರ್. ಮಂಜುನಾಥ್‌ ವೀಕ್ಷಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್ ಸಾವಿನ ಪ್ರಕರಣದಲ್ಲಿ ಜಾತಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಅಮಾನವೀಯ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಆವಿಷ್ಕಾರ ಸಂಸ್ಥೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ 20ನೇ ಬೀದಿ ನಾಟಕೋತ್ಸವ ಅಂಗವಾಗಿ ರಾಷ್ಟ್ರೀಯ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೋಹಿತ್ ದಲಿತ ಜಾತಿಗೆ ಸೇರಿದವರು, ಅಲ್ಲ ಎಂಬ ಚರ್ಚೆ ನಡೆಯುತ್ತಿದೆ. ಆದರೆ ದಲಿತ, ಹಿಂದುಳಿದ ವರ್ಗ, ಮೇಲ್ಜಾತಿಯನ್ನು ಮೀರಿ ಒಂದು ಜೀವ ಹೋಗಿದೆ’ ಎಂದರು.

‘ಸರ್ಕಾರಿ ಪ್ರಾಯೋಜಿತ ಜಾತಿ ರಾಜಕೀಯ ಈ ಪ್ರಕರಣದಲ್ಲಿ ಪ್ರವೇಶ ಪಡೆದಿದೆ. ಎಲ್ಲೋ ಇದ್ದ ರೋಹಿತ್ ತಂದೆಯನ್ನು ಕರೆತಂದು ಪತ್ರಿಕಾಗೋಷ್ಠಿ ಮಾಡುತ್ತಾರೆ. ಆದರೆ ರೋಹಿತ್‌ನ ಅಣ್ಣ, ತಂದೆಗೂ ನಮಗೂ ಸಂಬಂಧ ಇಲ್ಲ ಎನ್ನುತ್ತಾರೆ. ಸಾವಿನ ಸಂದರ್ಭದಲ್ಲಿ ಒಂದು ಕುಟುಂಬವನ್ನು ಬೀದಿಗೆ ತರುತ್ತಿರುವುದು ವಿಷಾದನೀಯ’ ಎಂದು ಅವರು ಹೇಳಿದರು.

‘ರೋಹಿತ್‌ನ ಎಡಪಂಥೀಯ ವಿಚಾರಧಾರೆಗಳನ್ನು ಒಪ್ಪಬಹುದು, ತಿರಸ್ಕರಿಬಹುದು. ಆದರೆ ಸರ್ಕಾರ ಎಡ, ಬಲಪಂಥೀಯ ಸಿದ್ಧಾಂತ ಬಿಟ್ಟು ಜೀವಪಂಥೀಯವಾಗಿರಬೇಕು. ವಿಷಾದವೆಂದರೆ ಸರ್ಕಾರಗಳು ಎಡವಟ್ಟುಪಂಥೀಯವಾಗಿವೆ’ ಎಂದು ವ್ಯಂಗ್ಯವಾಡಿದರು.

ಆವಿಷ್ಕಾರ ಸಂಸ್ಥೆಯ ಸಂಚಾಲಕ ಬಿ.ಆರ್. ಮಂಜುನಾಥ್ ಅವರು ರೋಹಿತ್ ಸಾವಿನ ಕುರಿತು ಗೊತ್ತುವಳಿ ಮಂಡಿಸಿದರು. ‘ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಸಹಿಷ್ಣುತೆಗೆ ಭಂಗ ತರುವ ಶಕ್ತಿಗಳನ್ನು ಮಟ್ಟಹಾಕಬೇಕು.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜೀನಾಮೆ ನೀಡಬೇಕು’ ಎಂದು  ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.