ಬೆಂಗಳೂರು: ‘ಜಿಎಸ್ಎಸ್ ಅವರ ನಡೆ ಅಥವಾ ನುಡಿಯಲ್ಲಿ ಎಂದಿಗೂ ಕೃತ್ರಿಮತೆ ಇರಲಿಲ್ಲ. ಅವರು ನುಡಿದಂತೆ ನಡೆದವರು’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು.
ಜಯನಗರದ ವಿಜಯ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ದೀಪಧಾರಿ’ ಡಾ.ಜಿಎಸ್‌ಎಸ್ ಅವರ ಸಾಹಿತ್ಯವನ್ನು ಕುರಿತ ರಾಜ್ಯಮಟ್ಟದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಜಿಎಸ್‌ಎಸ್ ಅವರು ಮಹಾ ಸ್ವಾಭಿಮಾನಿ. ಕುವೆಂಪು ಅವರಂತೆ ವೈಚಾರಿಕ ಮನೋಭಾವದವರು. ಅವರು ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಬೆಂಬಲ ನೀಡಿದವರು. ಅನ್ಯಾಯವನ್ನು ಯುವಕರು ವಿರೋಧಿಸಬೇಕು ಎಂದು ಹೇಳುತ್ತಿದ್ದರು. ಪ್ರತಿಭಟನೆ, ಚಳವಳಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಬೆನ್ನು ತಟ್ಟಿದವರು’ ಎಂದು ನೆನಪಿಸಿಕೊಂಡರು.
ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹೊನ್ನು ಸಿದ್ದಾರ್ಥ ಮಾತನಾಡಿ, ‘ಜಿಎಸ್‌ಎಸ್ ಸಾಂಸ್ಕೃತಿಕ, ಸಾಮಾಜಿಕ ಹಾಗೂ ವೈಚಾರಿಕ ಈ ಮೂರು ಗುಣಗಳ ಸಂಗಮವಾಗಿದ್ದವರು. ಅವರು ಪ್ರತಿಭೆಗೆ, ಪ್ರಬುದ್ಧತೆಗೆ ಆದ್ಯತೆ ನೀಡಿದ್ದವರು’ ಎಂದರು.
‘ಕೆಲವು ಸ್ವಯಂಘೋಷಿತ ವಿಮರ್ಶಕರು ಹಾಗೂ ವಿದ್ವಾಂಸರೆನಿಸಿ ಕೊಂಡವರು ಕನ್ನಡ ಅಧ್ಯಯನ ಕೇಂದ್ರದ ಕುರಿತು ಇಲ್ಲ ಸಲ್ಲದ ಟೀಕೆ ಮಾಡುತ್ತಾರೆ. ಆದರೆ, ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಚಟವಟಿಕೆಗಳನ್ನು ಪರಾಮರ್ಶಿಸಲಿ. ವೃಥಾ ಟೀಕೆ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ವಿಜಯ ಕಾಲೇಜಿನ ಡೀನ್ ಪ್ರೊ.ಆರ್.ವಿ.ಪ್ರಭಾಕರ ಅವರು, ‘ಇಂದಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಿಎಸ್ಎಸ್ ಅವರಿಂದ ಮತ್ತು ಅವರ ಸಾಹಿತ್ಯದಿಂದ ಕಲಿಯಬೇಕು. ಅವರ ಜೀವನಶೈಲಿ, ಪ್ರತಿಭೆ ಎಲ್ಲರಿಗೂ ಮಾದರಿಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.