ADVERTISEMENT

‘ಧಾರಾವಾಹಿ ರೂಪದ ಕಾದಂಬರಿ’

ಮಂಗಳಾಮುಖಿ ಮೇಘನಾ ಅವರಿಂದ ನಿಜಲಿಂಗ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 20:07 IST
Last Updated 14 ಆಗಸ್ಟ್ 2016, 20:07 IST
ಮಂಗಳಾಮುಖಿ ಮೇಘನಾ ಅವರು  ಭಾನುವಾರ ಕಸಾಪ ಸಭಾಂಗಣದಲ್ಲಿ ತರಕಾರಿ ಬುಟ್ಟಿಯಲ್ಲಿ ಕುಂ. ವೀರಭದ್ರಪ್ಪ ಅವರ ‘ನಿಜಲಿಂಗ’ ಕಾದಂಬರಿಯನ್ನು ಹೊತ್ತುತರುವ ಮೂಲಕ ಕೃತಿ ಲೋಕಾರ್ಪಣೆಗೊಳಿಸಿದರು –ಪ್ರಜಾವಾಣಿ ಚಿತ್ರ
ಮಂಗಳಾಮುಖಿ ಮೇಘನಾ ಅವರು ಭಾನುವಾರ ಕಸಾಪ ಸಭಾಂಗಣದಲ್ಲಿ ತರಕಾರಿ ಬುಟ್ಟಿಯಲ್ಲಿ ಕುಂ. ವೀರಭದ್ರಪ್ಪ ಅವರ ‘ನಿಜಲಿಂಗ’ ಕಾದಂಬರಿಯನ್ನು ಹೊತ್ತುತರುವ ಮೂಲಕ ಕೃತಿ ಲೋಕಾರ್ಪಣೆಗೊಳಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿಜಲಿಂಗ’ ಕಾದಂಬರಿ ರೂಪದ ಒಂದು ಮೆಗಾ ಧಾರಾವಾಹಿ. ಇಲ್ಲಿ ಯಾವುದೇ ಶಿಸ್ತುಬದ್ಧ ಕಥೆಯನ್ನು ಅಪೇಕ್ಷಿಸಲಾಗದು’ ಎಂದು ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

ಅಥಣಿಯ ಅನುಪಮ ಪ್ರಕಾಶನ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕುಂ. ವೀರಭದ್ರಪ್ಪ ಅವರ 18ನೇ ಕಾದಂಬರಿ ‘ನಿಜಲಿಂಗ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧಾರಾವಾಹಿ ಹೇಗೆ ಒಂದು ಕಥೆಯಲ್ಲಿ ಅನೇಕ ಕಥಾನಕಗಳನ್ನು ಒಳಗೊಂಡಿರುತ್ತದೆಯೊ ಹಾಗೇ ಕುಂ.ವೀ. ಅವರ ಕಾದಂಬರಿಯು ನಾನಾ ವಿಷಯ ವಸ್ತುಗಳ ಸಮ್ಮಿಶ್ರಣ. ಎಲ್ಲಿಂದಲೊ ಶುರುವಾಗಿ ನಡುವೆತ್ತೊ ದಾಟಿ, ಮತ್ತೆಲ್ಲೊ ಮುಕ್ತಾಯವಾಗುತ್ತದೆ. ಪಾತ್ರಗಳು ನಾನಾ ರೂಪಗಳನ್ನು ಧರಿಸುತ್ತಾ ಹೋಗುತ್ತವೆ’ ಎಂದು ಅವರು ಹೇಳಿದರು.

‘ನಿಜಲಿಂಗ ಕಾದಂಬರಿಯಲ್ಲಿ ಸುಮಾರು 300 ಪಾತ್ರಗಳು ಬರುತ್ತವೆ. ಆ ಎಲ್ಲಾ ಪಾತ್ರಗಳ ಬಗ್ಗೆಯೂ ಕಾದಂಬರಿಯಲ್ಲಿ ಪರಿಚಯವಿದೆ. ಹೀಗೆ ಒಂದು ಕಾದಂಬರಿಯ ನೆಪದಲ್ಲಿ ನೂರಾರು ಕಥೆಗಳು ಈ ಪುಸ್ತಕದಲ್ಲಿ ಸಿಗುತ್ತವೆ. ಹಾಗಾಗಿ ಒಂದು ವಸ್ತುವನ್ನು ಹಿಡಿದು ಓದಿದರೆ ಈ ಪುಸ್ತಕ ಅರ್ಥವಾಗುವುದು ಕಷ್ಟ’ ಎಂದರು.

‘ಆಂಧ್ರ-ಕರ್ನಾಟಕ ಗಡಿ ಪ್ರದೇಶದ ವಿಶಿಷ್ಟ ಜನಜೀವನವನ್ನು ಅಷ್ಟೇ ವಿಶಿಷ್ಟ ಭಾಷೆಯ ಮೂಲಕ ಕಟ್ಟಿಕೊಟ್ಟ ಕುಂ.ವೀ ಅವರು ಈ ಕೃತಿಯ ಮೂಲಕ ಮಧ್ಯ ಕರ್ನಾಟಕ ಭಾಗದ ಚಿತ್ರಣವನ್ನು ಹೆಣೆಯಲು ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.

ಪುಸ್ತಕದ ಬೆನ್ನುಡಿ ಬರೆದ ವಿಮರ್ಶಕ ಸಿ.ಎನ್‌. ರಾಮಚಂದ್ರನ್‌ ಅವರು ಮಾತನಾಡಿ, ‘ದೇಸಿ ಕಥೆ ಕಟ್ಟುವ ಕಲೆಗೆ 300 ವರ್ಷಗಳ ದೀರ್ಘ ಪರಂಪರೆ ಇದೆ. ಆ ನೆಲೆಯಲ್ಲಿ ಕಾಣುವ ಮೊದಲ ಕೃತಿ ಎಂದರೆ ‘ಸಾಂದರ್ಭಿಕ ಪರಿಣಯ’.

ದೇವಸ್ಥಾನ ಕಟ್ಟುವ ಕಲೆ, ಗಜ ಲಕ್ಷಣ ಶಾಸ್ತ್ರ, ಶಕುನ ಶಾಸ್ತ್ರ ಹೀಗೆ ನಾನಾ ಬಗೆಯನ್ನು ಒಂದೇ ಕೃತಿಯಲ್ಲಿ ಹೇಳಲಾಗುತ್ತದೆ. ಆ ಕೃತಿ ಉಂಟು ಮಾಡಿದ ದಿಗ್ಭ್ರಮೆಯನ್ನು ‘ನಿಜಲಿಂಗ’ ಕೃತಿಯೂ ಮಾಡಿದೆ’ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.