
ಬೆಂಗಳೂರು: ‘ಇರುವ ರಾಜಕಾಲುವೆಗಳನ್ನು ಸ್ವಚ್ಛ ಮಾಡದ ಸರ್ಕಾರ, ಒತ್ತುವರಿ ತೆರವು ಕಾರ್ಯಾಚರಣೆ ಹೆಸರಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರ ಸೂರುಗಳನ್ನು ಒಡೆಯುತ್ತಿದೆ. ಇದರ ನಷ್ಟವನ್ನು ಯಾರು ತುಂಬಿಕೊಡುತ್ತಾರೆ’ ಎಂದು ಚೋಳನಗರ ನಿವಾಸಿಗಳು ಪ್ರಶ್ನಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದರು.
‘ಕಟ್ಟಡ ಕಟ್ಟುವಾಗ, ನೀರು ಹಾಗೂ ವಿದ್ಯುತ್ ಸಂಪರ್ಕಗಳನ್ನು ತೆಗೆದುಕೊಳ್ಳುವಾಗ ಬೆಸ್ಕಾಂ, ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳೇ ಖುದ್ದು ಪರವಾನಗಿ ನೀಡಿದ್ದರು. ಅದೇ ಬಿಬಿಎಂಪಿಯ ಈಗಿನ ಅಧಿಕಾರಿಗಳು ಅವುಗಳೆಲ್ಲ ಅನಧಿಕೃತ ಎನ್ನುತ್ತಿದ್ದಾರೆ. ಅನಧಿಕೃತ ಆಗಿದ್ದರೆ, ಇಷ್ಟು ದಿನಗಳ ಕಾಲ ತೆರಿಗೆಯನ್ನು ಕಟ್ಟಿಸಿಕೊಂಡಿದ್ದು ಏಕೆ, ಕ್ರಮ ಕೈಗೊಳ್ಳದೇ ಸುಮ್ಮನೇ ಇದ್ದದ್ದು ಏಕೆ’ ಎಂದು ಕೆ.ಶಾಂತಲಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
‘ನಾವು ಎಲ್ಲಿಂದಲೋ ಬಂದು ಬದುಕು ಕಟ್ಟಿಕೊಂಡವರು. ಇದೀಗ ಮುನ್ಸೂಚನೆ ನೀಡದೆ, ಕಟ್ಟಡ ಒಡೆದರೆ ಏನು ಮಾಡಬೇಕು? ಈ ಕುರಿತು ಹಿರಿಯ ಅಧಿಕಾರಿಗಳು ಏನೂ ಉತ್ತರ ನೀಡುತ್ತಿಲ್ಲ. ಕೋರ್ಟ್ ಕೂಡ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಆದ್ದರಿಂದ, ನಾವು ರಾಜ್ಯಪಾಲ ಭೇಟಿಗೆ ಸಮಯ ಕೇಳಿದ್ದೇವೆ’ ಎಂದು ತಿಳಿಸಿದರು.
‘ಯಾವುದೇ ತೆರಿಗೆಯನ್ನು ಬಿಡದೇ ಕಟ್ಟಿಸಿಕೊಳ್ಳುವ ಸರ್ಕಾರ, ಸಾಲು–ಸಾಲಾಗಿ ಮನೆಗಳನ್ನು ಒಡೆಯುತ್ತಿದೆ. ಓದುವ ಮಕ್ಕಳು, ಗರ್ಭಿಣಿಯರ ಸಮೇತ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಇದಕ್ಕೆಲ್ಲ ನಷ್ಟ ತುಂಬಿಕೊಡುವವರು ಯಾರು?’ ಎಂದು ಸುಬ್ರಮಣ್ಯ ಎಂಬುವರು ಪ್ರಶ್ನಿಸಿದರು.
ಒತ್ತುವರಿ ತೆರವು ಅರ್ಜಿ ವಜಾ
ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾ ಮಾಡಿದೆ.
ಲತಾ ರಮೇಶ್ ಸಲ್ಲಿಸಿದ್ದ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
‘ಅರ್ಜಿದಾರರಿಗೆ ಈ ಪ್ರಕರಣದಲ್ಲಿ ಕಾರ್ಯಾಚರಣೆ ಪ್ರಶ್ನೆ ಮಾಡುವ ಕಾನೂನು ಬದ್ಧ ಅಧಿಕಾರ ಇಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಪೀಠವು ಅರ್ಜಿ ವಜಾ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.