ಬೆಂಗಳೂರು: ‘ಮನಸ್ಸು ಹಾಗೂ ಹೃದಯವನ್ನು ಉಲ್ಲಾಸಗೊಳಿಸುವ, ನೆಮ್ಮದಿ ನೀಡುವ ಕವಿತೆಗಳ ರಚನೆಯಾಗಬೇಕಿದೆ’ ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.
ಅಂಕಿತ ಪುಸ್ತಕ ಪ್ರಕಾಶನವು ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 11 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮನಸ್ಸನ್ನು ಉಲ್ಲಸಿತಗೊಳಿಸುವ ಕವಿತೆಗಳು ಇಂದು ಕ್ಷೀಣಿಸುತ್ತಿವೆ. ಕವಿತೆಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಬೇಕು. ಆದರೆ, ಇಂತಹ ಕವಿತೆಗಳ ಕೊರತೆ ಕಾಣುತ್ತಿದೆ’ ಎಂದರು.
‘ಯುವಕರು ಉತ್ತಮ ಕವಿತೆಗಳನ್ನು ಬರೆದು, ಉತ್ತಮ ಕವಿಗಳಾಗಲು ಪ್ರಯತ್ನ ಪಡಬೇಕು. ಕವಿತೆಗಳಲ್ಲಿ ತಮ್ಮನ್ನು ತಾವು ಹೆಚ್ಚು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
ಲೇಖಕ ಜೋಗಿ ಮಾತನಾಡಿ, ‘ಇಂದು ಫೇಸ್‌ಬುಕ್‌ನಿಂದ ಸಾಕಷ್ಟು ಕವಿಗಳ ಸೃಷ್ಟಿಯಾಗುತ್ತಿದೆ. ಇದನ್ನು ಫೇಸ್‌ಬುಕ್ ಮನ್ವಂತರ ಎಂದು ಕರೆಯಬಹುದು. ಹಾಗಾಗಿ ಕವಿತೆ ಓದಲು ಅಥವಾ ಬರೆಯಲು ಪೇಪರ್, ಪುಸ್ತಕದ ಅಗತ್ಯವೇ ಇಲ್ಲವಾಗಿದೆ’ ಎಂದು ನುಡಿದರು.
ಬಿಡುಗಡೆಯಾದ ಪುಸ್ತಕಗಳು: ಚೇತನಾ ತೀರ್ಥಹಳ್ಳಿ– ‘ಶಬರಿಯ ಅವಸರ’ ಕವಿತೆಗಳು, ಹೃದಯಶಿವ –‘ಹರಿವ ತೊರೆ’ ಕಿರುಗವಿತೆ, ಲಾರಾ ಇಂಗಲ್ಸ್ ವೈಲ್ಡರ್– ‘ದೊಡ್ಡಕಾಡಿನಲ್ಲಿ ಪುಟ್ಟಮನೆ’, ‘ಹುಲ್ಲುಗಾವಲಿನಲ್ಲಿ ಪುಟ್ಟಮನೆ’, ‘ರೈತರ ಹುಡುಗ’, ‘ಪ್ಲಂ ನದಿಯ ತೀರದಲ್ಲಿ’, ‘ಚಳಿಯ ಸುಳಿಯಲ್ಲಿ’, ‘ಸಿಲ್ವರ್ ಲೇಕ್ ದಡದಲ್ಲಿ’, ‘ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ’, ‘ಆ ಸೊಗಸಿನ ಬಂಗಾರದ ದಿನಗಳು’ ಅನುವಾದ ಕೃತಿಗಳು (ಅನುವಾದ– ಎಸ್. ಅನಂತನಾರಾಯಣ) ಹಾಗೂ ‘ಮೊದಲ ನಾಲ್ಕು ವರ್ಷಗಳು’ (ಅನುವಾದ– ಕೆ.ಪಿ. ಈಶಾನ್ಯೆ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.