ಬೆಂಗಳೂರು: ಕುಟುಕು ಕಾರ್ಯಾಚರಣೆಗೆ ತೆರಳಿದ್ದ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ನ್ಯೂಸ್9 ಆಂಗ್ಲ ಸುದ್ದಿವಾಹಿನಿಯ ವರದಿಗಾರರು ನೀಡಿದ್ದ ದೂರಿನ ಸಂಬಂಧ ಸದಾಶಿವನಗರ ಪೊಲೀಸರು ಸೋಮವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಆದರೆ, ಎಫ್‌ಐಆರ್‌ನ ಆರೋಪಿಗಳ ವಿವರದ ಕಾಲಂನಲ್ಲಿ ‘ಅಪರಿಚಿತರು’ ಎಂದು ನಮೂದಿಸಲಾಗಿದೆ.
‘ನ್ಯೂಸ್ 9 ಆಂಗ್ಲ’ ಸುದ್ದಿವಾಹಿನಿಯ ವರದಿಗಾರರಾದ ಶ್ರೇಯಸ್ ಮತ್ತು ಶ್ವೇತಾಪ್ರಭು ಅವರು ಮಾ.10ರಂದು ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಕುಟುಕು ಕಾರ್ಯಾಚರಣೆಗೆ ತೆರಳಿದ್ದರು.
ಶ್ರೇಯಸ್ ಮತ್ತು ಶ್ವೇತಾಪ್ರಭು ಅವರು ತಮಗೆ ₨ 6 ಲಕ್ಷ ಲಂಚ ನೀಡಲು ಬಂದಿದ್ದರು ಎಂದು ಆರೋಪಿಸಿ ಡಿ.ಕೆ.ಶಿವಕುಮಾರ್, ಆ ಇಬ್ಬರನ್ನು ಸದಾಶಿವನಗರ ಪೊಲೀಸರಿಗೆ ಹಿಡಿದುಕೊಟ್ಟಿದ್ದರು.
ನಂತರ ಆ ವರದಿಗಾರರು, ‘ಡಿ.ಕೆ.ಶಿವಕುಮಾರ್ ಮತ್ತು ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಆರೋಪಿಸಿ ಮಾ.11ರಂದು ಪ್ರತಿದೂರು ನೀಡಿದ್ದರು. ಅಲ್ಲದೇ, ‘ಡಿ.ಕೆ.ಶಿವಕುಮಾರ್ ಮತ್ತು ಬೆಂಬಲಿಗರು ತಮ್ಮ ಮಾನಭಂಗಕ್ಕೆ ಯತ್ನಿಸಿದ್ದರು’ ಎಂದು ಶ್ವೇತಾಪ್ರಭು ದೂರಿನಲ್ಲಿ ಆರೋಪಿಸಿದ್ದರು.
‘ಕಾನೂನು ಮತ್ತು ಸುವ್ಯವಸ್ಥೆ (ಪೂರ್ವ) ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅವರು ಪ್ರಕರಣದ ಪೂರ್ವಭಾವಿ ವಿಚಾರಣೆ ನಡೆಸಿ ವರದಿ ನೀಡಿದ್ದರು. ಆ ವರದಿಯ ಬಗ್ಗೆ ನಗರ ಪೊಲೀಸ್ ಕಮಿಷನರ್ ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದು, ಘಟನೆ ಸಂಬಂಧ ಅಪರಿಚಿತರ ವಿರುದ್ಧ ಹಲ್ಲೆ, ಮಾನಭಂಗ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದರು. ಆ ಆದೇಶದನ್ವಯ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಡೀ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆಯಬೇಕಿದ್ದರಿಂದ ಪ್ರಕರಣ ದಾಖಲಿಸುವುದು ವಿಳಂಬವಾಯಿತು’ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.