ಬೆಂಗಳೂರು: ‘ಭಕ್ತಿ ಸಾಹಿತ್ಯ ಪರಂಪರೆಯ ಕೊನೆಯ ಕವಿ ಪು.ತಿ.ನರಸಿಂಹಾಚಾರ್. ಭಕ್ತಿಯ ಜತೆಗೆ ಜಾತ್ಯತೀತ ದೃಷ್ಟಿಕೋನದಿಂದಲೇ ಜನರನ್ನು ಸೆಳೆದರು’ ಎಂದು ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಆಯೋಜಿಸಿದ್ದ ಸಾಕ್ಷ್ಯಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕನ್ನಡದ ಸಂದರ್ಭದಲ್ಲಿ ಹರಿಹರ, ಕುಮಾರವ್ಯಾಸರ ಭಕ್ತಿ ಪರಂಪರೆಯನ್ನು ಸಾರಸ್ವತ ಲೋಕದಲ್ಲಿ ಮುಂದುವರಿಸಿದ್ದು ಪು.ತಿ.ನ. ಆದರೆ, ಅವರ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಲು ಈವರೆಗೂ ಸಾಧ್ಯವಾಗದಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.
‘ಪು.ತಿ.ನ ಕೃತಿಗಳಲ್ಲಿ ವ್ಯಕ್ತಿ ಪಾಲಿಸಬೇಕಾದ ಮೌಲ್ಯಗಳಿವೆ. ಅದ್ಬುತವಾದ ಗೀತರೂಪಕಗಳನ್ನು ನೀಡಿದ್ದ ಅವರ ಕೃತಿಗಳ ಬಗ್ಗೆ ಮರುವ್ಯಾಖ್ಯಾನ ನಡೆಯಬೇಕಿದೆ’ ಎಂದು ತಿಳಿಸಿದರು.
‘ಪಾರದರ್ಶಕ ವ್ಯಕ್ತಿತ್ವದ ಅನಂತಮೂರ್ತಿ ಅವರು ಬರೆದಂತೆ ಬದುಕಿದರು. ಭಾರತೀಯ ಸಂದರ್ಭದಲ್ಲಿ ಮುಖ್ಯವೆನಿಸುವ ಬರಹಗಾರರ ಪಟ್ಟಿಯಲ್ಲಿರುವ ಖುಷ್ವಂತ್ ಸಿಂಗ್, ಡಾ.ಯು.ಆರ್.ಅನಂತಮೂರ್ತಿ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವುದು ಸಂತೋಷದ ವಿಚಾರ’ ಎಂದು ಶ್ಲಾಘಿಸಿದರು.
ಲೇಖಕಿ ವಿಜಯಾ, ‘ಚಂದ್ರಶೇಖರ ಕಂಬಾರ ಅವರು ಸಿದ್ಧಪಡಿಸಿದ ಸಾಕ್ಷ್ಯಚಿತ್ರ ಪು.ತಿ.ನ ಅವರ ವ್ಯಕ್ತಿತ್ವವನ್ನು ಹಿಡಿದಿಡುವಲ್ಲಿ ಸೋತಿದೆ’ ಎಂದು ಹೇಳಿದರು.
‘ದೇವನೂರ ಮಹಾದೇವ ಅವರ ಮಗಳ ಕವನಸಂಕಲನಕ್ಕೆ ಮುನ್ನುಡಿ ಬರೆದುಕೊಂಡುವಂತೆ ಪು.ತಿ.ನ ಅವರ ಮನೆಯ ಬಾಗಿಲನ್ನು ರಾತ್ರಿ 12ಕ್ಕೆ ತಟ್ಟಿದ್ದೆವು. ಒಂದಿಷ್ಟು ಬೇಸರ ಮಾಡಿಕೊಳ್ಳದೇ ಮುನ್ನುಡಿ ಬರೆದುಕೊಟ್ಟಿದ್ದರು’ ಎಂದು ನೆನಪಿಸಿಕೊಂಡರು.
ಪು.ತಿ.ನರಸಿಂಹಾಚಾರ್, ಡಾ.ಯು.ಆರ್.ಅನಂತಮೂರ್ತಿ, ಖುಷ್ವಂತ್ ಸಿಂಗ್, ಇಂದಿರಾ ಗೋಸ್ವಾಮಿ, ಎಂ.ಟಿ.ವಾಸುದೇವನ್ ನಾಯರ್ ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.