ಬೆಂಗಳೂರು: ‘ಕವಿಯಾದವನು ಎಂದಿಗೂ ಬೆಳೆಯುವುದಿಲ್ಲ. ಬರೆಯುತ್ತಾನಷ್ಟೇ. ಬೆಳೆಯುವುದು ಅಂದರೆ ಅಲ್ಲಿಗೆ ಮುಕ್ತಾಯ ಎಂದರ್ಥ. ಎಲ್ಲಿಯವರೆಗೆ ಆತ ಬರೆಯುತ್ತಾ ಇರುತ್ತಾನೋ, ಅಲ್ಲಿಯವರೆಗೂ ಬೆಳೆಯುತ್ತಲೇ ಇರುತ್ತಾನೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.
ಚಾರುಮತಿ ಪ್ರಕಾಶನ ಮತ್ತು ಅಕ್ಷಯ ಫೌಂಡೇಶನ್ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಅವರ ‘ಹರಿಗೋಲು’ ಕವನ ಸಂಕಲನ ಹಾಗೂ ಸಂಶೋಧನಾ ವಿದ್ಯಾರ್ಥಿ ನಾರಾಯಣ್ ಕೆ. ಕ್ಯಾಸಂಬಳ್ಳಿ ಸಂಪಾದಿಸಿದ ಹನುಮಂತಯ್ಯ ಅವರ ಕಾವ್ಯಗಳ ಕುರಿತ ವಿಮರ್ಶೆಗಳ ಸಂಕಲನ ‘ಹಂಗಿಲ್ಲದ ಅಂಗಳದಲಿ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪೈರು ಬೆಳೆದು ನಿಂತಿತು ಎಂದರೆ ಕೊಯ್ಲು ಮಾಡುತ್ತಾರೆ ಎನ್ನುವ ಎಚ್ಚರಿಕೆ ಇಟ್ಟುಕೊಂಡೇ ಕವಿಯಾದವರೆಲ್ಲ ಬರವಣಿಗೆ ಮಾಡಬೇಕು. ಬರವಣಿಗೆ ಯಾರಿಗೆ ಲಂಪಟತೆಯಾಗಿದೆಯೋ ಅವರು ಮಹಾವಾಕ್ಯಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಲಂಪಟತೆ ಇಲ್ಲದ ಬರವಣಿಗೆಯಿಂದ ಯಾವಾಗಲೂ ಉತ್ಕೃಷ್ಟ ರಚನೆಗಳು ಹೊರಹೊಮ್ಮುತ್ತವೆ’ ಎಂದು ಹೇಳಿದರು.
‘ರಾಜಕೀಯ ತಾತ್ವಿಕ ತಿಳಿವಳಿಕೆಯೊಂದಿಗೆ ಕಾವ್ಯಾತ್ಮಕ ನೆಲೆಯಲ್ಲಿ ಕೂಡ ಒಟ್ಟಿಗೆ ಸ್ಪಂದಿಸುವ ಅಖಂಡ ಸಂವೇದನೆ ಗಳಿಸಿಕೊಂಡಿರುವ ಹನುಮಂತಯ್ಯ ಅವರಿಗೆ, ಕವಿತ್ವ ಶಕ್ತಿ ಅಂತರಂಗದ ಶಕ್ತಿಯಾಗಿದೆ. ಬರವಣಿಗೆ ಎನ್ನುವುದು ಅವರ ಬದುಕಿನ ಕ್ರಮವಾಗಿದೆ’ ಎಂದು ತಿಳಿಸಿದರು.
ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ, ‘ಹನುಮಂತಯ್ಯ ಅವರ ‘ಹರಿಗೋಲು’ ಸಂಕಲನದ ಕವನಗಳಲ್ಲಿ ನಾವಾಗಿಯೇ ಹಂಬಲಿಸಿ ಬರಮಾಡಿಕೊಂಡ ಆಧುನಿಕತೆಯಲ್ಲಿ ನಿಂತು, ಅಳಿಸಿ ಹೋದ ಗತಕಾಲದ ಸುಂದರ ನೆನಪುಗಳನ್ನು ನೆನೆಯುತ್ತ ನಡೆಸುವ ಹೊಸ ಹುಡುಕಾಟದ ಛಾಯೆ ಕಾಣುತ್ತದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ವಿಮರ್ಶಕ ನಟರಾಜ ಹುಳಿಯಾರ್ ಮಾತನಾಡಿ, ‘ಚರಿತ್ರೆ ಮತ್ತು ರಾಜಕಾರಣಗಳು ಚಲಿಸುವ ಕ್ರಮವನ್ನು ಅದರೊಳಗಿದ್ದು ನೋಡುವ ಅವಕಾಶ ಹನುಮಂತಯ್ಯ ಅವರಿಗೆ ದೊರೆತಿದೆ. ದಲಿತವಾದಿಗಳು ಅಂಬೇಡ್ಕರ್ ಅವರನ್ನು ಪ್ರೀತಿಸುತ್ತ, ಗಾಂಧಿಯನ್ನು ವಿರೋಧಿಸುವ ಜಾಡಿಗೆ ಬಿದ್ದಿರುವ ಪ್ರಸ್ತುತ ಸನ್ನಿವೇಶದಲ್ಲಿ ಇವರ ಕಾವ್ಯ,
ಗಾಂಧಿಯನ್ನು ಮತ್ತೆ ಹುಡುಕುವ ಪ್ರಯತ್ನ ಮಾಡುತ್ತಿದೆ’ ಎಂದು ವಿಶ್ಲೇಷಿಸಿದರು. ಎಲ್.ಹನುಮಂತಯ್ಯ ಮಾತನಾಡಿ, ‘ರಾಜಕೀಯ, ಸೃಜನಶೀಲತೆಯನ್ನು ಆಪೋಶನ ತೆಗೆದುಕೊಳ್ಳುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ನಾನು ಸಕ್ರಿಯ ರಾಜಕೀಯದಲ್ಲಿ ಇದ್ದುಕೊಂಡೇ ಮೂರು ಕವನ ಸಂಕಲನಗಳನ್ನು ಹೊರ ತಂದಿರುವೆ’ ಎಂದು ಹೇಳಿದರು.
‘ನನಗೆ ರಾಜಕೀಯ ಮತ್ತು ಕವಿತೆ ಎಂದಿಗೂ ಬೇರೆ ಎನಿಸಲಿಲ್ಲ. ಎರಡನ್ನೂ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕವಿತೆಗೆ ನನ್ನ ಮೊದಲ ಆದ್ಯತೆ. ನಂತರ ರಾಜಕಾರಣ. ಅದಕ್ಕಾಗಿಯೇ ನನಗೆ ರಾಜಕಾರಣದಲ್ಲಿ ತುಂಬಾ ಎತ್ತರಕ್ಕೆ ಏರಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.
ಬಾರ್‌ನಲ್ಲಿ ಬರೆದದ್ದೆ ಜಾಸ್ತಿ
‘ಬಹುತೇಕರು ಕವಿತೆಗಳು ಏಕಾಂತದಲ್ಲಿ ಹುಟ್ಟುತ್ತವೆ ಎನ್ನುತ್ತಾರೆ. ನನ್ನ ವಿಷಯದಲ್ಲಿ ಹಾಗೇನೂ ಇಲ್ಲ. ಸಂತೆಯ ಮಧ್ಯೆಯೇ ನಾನು ಕವಿತೆಗಳನ್ನು ಬರೆದದ್ದು ಜಾಸ್ತಿ. ಬಾರ್‌ನಲ್ಲಿ ಬರೆದದ್ದು ಅದಕ್ಕಿಂತಲೂ ಜಾಸ್ತಿ. ಬಾರ್‌ನಲ್ಲಿಯೇ ಬರೆದ ‘ಅವ್ವ’ ಕವಿತೆ ಬಹು ಮೆಚ್ಚಿಗೆ ಪಡೆದಿದೆ’ ಎಂದು ಹನುಮಂತಯ್ಯ ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಒಂದು ಕ್ಷಣ ನಗೆಯ ಸಂಚಾರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.