ADVERTISEMENT

‘ಭೂಮಿ ನೀಡಿದವರಿಗೆ ಅಭಿವೃದ್ಧಿಪಡಿಸಿದ ಜಮೀನು’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಬೆಂಗಳೂರು: ಬೆಂಗಳೂರು – ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಯ ಭಾಗವಾಗಿ ನಗರದ ಬಿಡದಿ ಸಮೀಪ ತಲೆ ಎತ್ತಲಿರುವ ಕಾರ್ಪೊರೇಟ್‌ ಟೌನ್‌ಷಿಪ್‌ಗೆ ಜಮೀನು ನೀಡಿದವರಿಗೆ ಅಭಿವೃದ್ಧಿಪಡಿಸಿದ ನಿವೇಶನದಲ್ಲಿ ಶೇಕಡ 40ರಷ್ಟನ್ನು  ಪರಿಹಾರ ರೂಪದಲ್ಲಿ ನೀಡುವುದಾಗಿ ನಂದಿ ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಸಂಸ್ಥೆ ಹೈಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಗೋಣಿಪುರ, ತಿಪ್ಪೂರು ಮತ್ತು ಶೀಗೇಹಳ್ಳಿ, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ದೊಡ್ಡಕುಂಟನಹಳ್ಳಿ ಮತ್ತು ಕೊಡಿಯಾಲ ಕರೇನಹಳ್ಳಿ ವ್ಯಾಪ್ತಿಯಲ್ಲಿ ಈ ಟೌನ್‌ಷಿಪ್‌ ತಲೆಎತ್ತಲಿದೆ.

ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ನೈಸ್‌ ಪರ ವಕೀಲರು ಈ ವಿವರಗಳನ್ನು ಶುಕ್ರವಾರ ಸಲ್ಲಿಸಿದರು.

‘ಕರ್ನಾಟಕ ನಗರ ಯೋಜನಾ ನಿಯಮ ಅನ್ವಯ, ಪ್ರತಿ ಒಂದು ಎಕರೆ ಜಮೀನಿನಲ್ಲಿ ಶೇಕಡ 45ರಷ್ಟು, ಅಂದರೆ 19,602 ಚದರ ಅಡಿ ಜಾಗವನ್ನು ರಸ್ತೆ, ಉದ್ಯಾನ, ಆಟದ ಮೈದಾನ ಮತ್ತು ಇತರ ನಾಗರಿಕ ಸೌಲಭ್ಯ ಕಲ್ಪಿಸಲು ಮೀಸಲಿಡಬೇಕು. ಇನ್ನುಳಿದ ಶೇ 55ರಷ್ಟು ಜಮೀನನ್ನು (ಅಂದರೆ 23,958 ಚದರ ಅಡಿ) ನಾವು ಅಭಿವೃದ್ಧಿಪಡಿಸಬಹುದು.

ಇದರಲ್ಲಿ ಶೇ 40ರಷ್ಟನ್ನು (9,853 ಚದರ ಅಡಿ) ಜಮೀನು ಕೊಟ್ಟವರಿಗೆ ಪರಿಹಾರ ರೂಪದಲ್ಲಿ ನೀಡಲಾಗುವುದು. ಜಮೀನಿನ ಮೂಲ ಮಾಲೀಕರು ಯಾವುದೇ ಅಭಿವೃದ್ಧಿ ಶುಲ್ಕ ನೀಡಬೇಕಿಲ್ಲ’ ಎಂದು ಪೀಠಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ವಿವರಿಸಲಾಗಿದೆ. ಐದು ಗುಂಟೆಗಿಂತ ಕಡಿಮೆ ಜಮೀನು ನೀಡುವವರಿಗೆ ಪರಿಹಾರವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ.

ನೈಸ್‌ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ, ‘ಜಮೀನು ನೀಡಿದವರಿಗೆ ಸೂಕ್ತ ಪರಿಹಾರ ಯೋಜನೆ ಸಿದ್ಧಪಡಿಸಿ’ ಎಂದು ಸಂಸ್ಥೆಗೆ ಸೂಚಿಸಿತ್ತು. ಅರ್ಜಿಯ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.