ADVERTISEMENT

‘ಮಾರ್ಕ್ಸ್ ವಾದದ ಚಿಂತನೆ ಪಸರಿಸಿದ ಅಂತೋನಿ ಗ್ರಾಂಶ್ಚಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಮಾರ್ಕ್ಸ್ ಮತ್ತು ಲೆನಿನ್ ಆರ್ಥಿಕ ಸಿದ್ಧಾಂತಗಳಿಂದ ಪ್ರೇರೇಪಿ­ತರಾಗಿದ್ದ ಹಲವರಲ್ಲಿ ಅಂತೋನಿ ಗ್ರಾಂಶ್ಚಿಯ ಕೂಡ ಒಬ್ಬರು. ಅವರು ಈ ಸಿದ್ದಾಂತಗಳ ವಿಸ್ತರಣೆಯಲ್ಲಿಯೂ ತೊಡಗಿಕೊಂಡರು’ ಎಂದು ಸಂಸ್ಕೃತ ವಿಶ್ವ­ವಿದ್ಯಾಲಯದ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು.

ಜಾತಿ ವಿನಾಶ ವೇದಿಕೆಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯ­ಕ್ರಮದಲ್ಲಿ ಡಿ.ಮನೋಹರ ಚಂದ್ರಪ್ರಸಾದ್ ಅವರ  ‘ಪ್ರತಿ ಸಂಸ್ಕೃತಿ– ಅಂತೋನಿ ಗ್ರಾಂಶ್ಚಿಯ ಚಿಂತನೆಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಇಟಲಿಯಲ್ಲಿದ್ದುಕೊಂಡು ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು, ಮಾರ್ಕ್ಸ್ ವಾದದ ಚಿಂತನೆಯನ್ನು ಪಸರಿಸಿದರು. ಮೂಲ ಸಂಸ್ಕೃತಿಯ ಆಕೃತಿಯಿಂದ ಹೊಸ ಚಿಂತನೆಯುಳ್ಳ ಪ್ರತಿ ಸಂಸ್ಕೃತಿಯನ್ನು ಹುಟ್ಟುಹಾಕುವಲ್ಲಿ ಶ್ರಮಿಸಿದವರು ಗ್ರಾಂಶ್ಚಿಯ’ ಎಂದು ಬಣ್ಣಿಸಿದರು.

ಶಿಕ್ಷಣದ ಬಗೆಗಿನ ಚಿಂತನೆಗಳೂ ಪ್ರಸ್ತುತ ಭಾರತ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಗೋಚರಿಸುತ್ತದೆ. ಜಾತಿ, ಕೋಮು ವಿರೋಧಿ ಹೋರಾಟವು  ಪ್ರಜಾತಾಂತ್ರಿಕ ಕ್ರಾಂತಿಯನ್ನು ಪ್ರಾರಂಭಿಸುವ ಹೋರಾಟ­ವಾಗ­ಬೇಕು ಎಂಬುದು ಅವರ ಆಶಯವಾಗಿತ್ತು’ ಎಂದು ಹೇಳಿದರು.

ಲೇಖಕ ಡಿ.ಮನೋಹರ ಚಂದ್ರಪ್ರಸಾದ್ ಮಾತನಾಡುತ್ತಾ, ‘ಜಾತಿ ಮತ್ತು ಕೋಮುವಾದ ವ್ಯವಸ್ಥೆಯನ್ನು ರಕ್ಷಿಸಿ ಪೋಷಿಸುತ್ತಿರುವ ಅರೆ ಉಳಿಗಮಾನ್ಯ ಮಧ್ಯವರ್ತಿ, ಅಧಿಕಾರಿಶಾಹಿ, ಬ್ರಾಹ್ಮಣಶಾಹಿ, ಬಂಡವಾಳಶಾಹಿ ಹಾಗೂ ಜಾಗತಿಕ ಸಾಮ್ರಾಜ್ಯಶಾಹಿ ವಾದಗಳನ್ನು ಮೂಲೋತ್ಪಾಟನೆ ಮಾಡುವ ಗುರಿಯನ್ನು ಹೊಂದಿರುವ ದಿಸೆಯಲ್ಲಿ ಗ್ರಾಂಶ್ಚಿಯವರ ಚಿಂತನೆಗಳಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.