ADVERTISEMENT

‘ಮೂಲ ವಿಜ್ಞಾನದ ಅರಿವಿಲ್ಲದ ರಾಜಕಾರಣಿಗಳು ಈಡಿಯಟ್‌ಗಳು’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:04 IST
Last Updated 20 ಡಿಸೆಂಬರ್ 2013, 20:04 IST

ಬೆಂಗಳೂರು: ‘ಮೂಲ ವಿಜ್ಞಾನದ ಅರಿ­ವಿಲ್ಲದ ಭಾರತದ ರಾಜಕಾರಣಿಗಳು ಮತ್ತು ಹೊಸತನ್ನು ಸಂಶೋಧಿಸದೆ  ಹೊರದೇಶಗಳ ಅನ್ವೇಷಣೆಗಳನ್ನೇ ಅನು­ಕ­ರಿ­ಸುವ ವಿಜ್ಞಾನಿಗಳು  ಇಬ್ಬರೂ ಈಡಿಯಟ್‌ಗಳು’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಬೇಸರ­ದಿಂದ ನುಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರ­ಜ್ಞಾನ ಅಕಾಡೆಮಿ ಹಾಗೂ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಅಕಾಡೆಮಿಯ 6ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಸಾವಿರಾರು ವಿದ್ಯಾರ್ಥಿಗಳನ್ನು ರೂಪಿ­ಸುವ ಒಬ್ಬ ವಿಜ್ಞಾನದ ಶಿಕ್ಷಕನಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಶಾಲೆಗಳಲ್ಲಿ ಪ್ರಯೋ­ಗಾ­ಲಯಗಳಿಲ್ಲ. ಹೀಗಿದ್ದಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದಾದರೂ ಹೇಗೆ? ಮೂಲ ವಿಜ್ಞಾನವನ್ನು ಸರ್ಕಾರ  ಕಡೆಗ­ಣಿಸು-­ತ್ತಿರುವುದರಿಂದ ನಾವು ಬಹಳ ಹಿಂದೆ ಬಿದ್ದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಿದ ಚೀನಾ ಕೇವಲ ಒಂದು ದಶಕದಲ್ಲಿ ವಿಶ್ವದ 2ನೇ ದೊಡ್ಡ ತಾಂತ್ರಿಕ ರಾಷ್ಟ್ರ­ವಾಗಿ ಬೆಳೆದಿದೆ. ವಿಜ್ಞಾನ ಮತ್ತು ತಂತ್ರ­ಜ್ಞಾನದ ನೆರವಿಲ್ಲದೆ ದೇಶ ಮುಂದುವ­ರಿಯಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕು’ ಎಂದರು.

ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ‘ತಂತ್ರಜ್ಞಾನವು ವಿಜ್ಞಾನದ ಉಪ ಉತ್ಪಾದನೆ ಅಷ್ಟೆ. ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಮೂಲ ವಿಜ್ಞಾನದ ಮಹತ್ವವನ್ನು ಅರಿತುಕೊಳ್ಳಬೇಕು.  ಈ ಕ್ಷೇತ್ರಕ್ಕೆ ಆದ್ಯತೆ ನೀಡುವ ಸಲುವಾಗಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನು­ದಾನವನ್ನು ನೀಡುತ್ತೇವೆ’ ಎಂದರು.

‘ರಾಜ್ಯದ ವಿವಿಧೆಡೆ ಹತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಂಗಳೂರು ಸಮೀಪದ ಪಿಲಿಕುಳದಲ್ಲಿ ₨ 24.5 ಕೋಟಿ ವೆಚ್ಚದಲ್ಲಿ ದೇಶದ  ಮೊದಲ  3ಡಿ ತಾರಾಲಯವನ್ನು ನಿರ್ಮಿಸಲಾಗುತ್ತಿದೆ’ ಎಂದು ಅವರು ನುಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸದಸ್ಯ ಕಾರ್ಯದರ್ಶಿ ಡಾ.ಎಚ್.ಹೊನ್ನೇಗೌಡ, ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಥಾಮಸ್ ಮಾಥ್ಯೂ, ಕುಲಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ ಮೊದಲಾದವರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.