ಬೆಂಗಳೂರು: ‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದ ಗೃಹರಕ್ಷಕ, ಪೌರರಕ್ಷಣಾ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ಹೆಚ್ಚು ಕ್ರಿಯಾಶೀಲವಾಗಿದೆ’ ಎಂದು ಕೇಂದ್ರ ಪೌರ ರಕ್ಷಣಾ ಇಲಾಖೆಯ ಮಹಾನಿರ್ದೇಶಕ ಸಂಜಯ್ ಸೆಹ್ಗಲ್ ಅಭಿಪ್ರಾಯಪಟ್ಟರು.
ಕೇಂದ್ರ ಗೃಹ ಸಚಿವಾಲಯವು ರಾಜ್ಯ ಗೃಹರಕ್ಷಕ ದಳದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಪೌರ ರಕ್ಷಣೆ’ ವಿಷಯ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶದ 28 ರಾಜ್ಯಗಳಲ್ಲಿ ಪೌರರಕ್ಷಣಾ ಇಲಾಖೆ ಅಸ್ತಿತ್ವದಲ್ಲಿದ್ದು, ಒಟ್ಟು 5.6 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಇಲಾಖೆಗಳು ಹೆಚ್ಚು ಕ್ರಿಯಾಶೀಲವಾಗಿವೆ’ ಎಂದರು.
‘1968ರಲ್ಲಿ ಪೌರರಕ್ಷಣಾ ಪಡೆ ಅಸ್ತಿತ್ವಕ್ಕೆ ಬಂತು. ಮೊದಲು ಸೇನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಈ ಪಡೆ, 1971ರಲ್ಲಿ ನಡೆದ ಭಾರತ–ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ಸೈನಿಕರೊಂದಿಗೆ ಸೇರಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಆದರೆ, ಆ ನಂತರದಲ್ಲಿ ಪೌರರಕ್ಷಣಾ ಪಡೆ ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿತು’ ಎಂದು ಹೇಳಿದರು.
‘ಪೌರ ರಕ್ಷಣಾ ಪಡೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು ನಿರ್ಧರಿಸಿದ ಕೇಂದ್ರ ಸರ್ಕಾರ, ಈ ಪಡೆಯನ್ನು ವಿಪತ್ತು ನಿರ್ವಹಣಾ ಘಟಕದ ಜತೆ ಸೇರಿಸಿ 2010ರಲ್ಲಿ ಹೊಸ ಕಾನೂನನ್ನು ಜಾರಿ ಮಾಡಿತು. ಇತ್ತೀಚಿನ ಉತ್ತರಖಂಡದ ಪ್ರವಾಹ ಹಾಗೂ ಫೈಲಿನ್ ಚಂಡಮಾರುತದ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಯಲ್ಲಿ ಗೃಹರಕ್ಷಕ ಹಾಗೂ ಪೌರರಕ್ಷಣಾ ಇಲಾಖೆ ಸಿಬ್ಬಂದಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ’ ಎಂದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಓಂಪ್ರಕಾಶ್ ಮಾತನಾಡಿ, ‘ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಭಾಗ ಪೌರ ಸಿಬ್ಬಂದಿ ಇರಬೇಕು ಎಂದು ಸರ್ಕಾರ ಹೇಳುತ್ತದೆ. ಈ ಪ್ರಕಾರ ನಗರದಲ್ಲಿ ಒಟ್ಟು ಒಂದು ಲಕ್ಷ ಸಿಬ್ಬಂದಿ ಇರಬೇಕು. ಆದರೆ, ನಗರದಲ್ಲಿ ಕೇವಲ 13,000 ಪೌರರಕ್ಷಕರಿದ್ದಾರೆ’ ಎಂದು ಹೇಳಿದರು.
‘2013ರ ವಿಧಾನ ಪರಿಷತ್ ಚುನಾವಣೆಯಲ್ಲಿ 1,000 ಪೌರರಕ್ಷಕರು ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರ್‌್ಯಾಲಿ ಸಂದರ್ಭದಲ್ಲಿ ಭದ್ರತೆಗೆ ಪೊಲೀಸರೊಂದಿಗೆ ಸಹಕರಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪೌರರಕ್ಷಕರು ವೃತ್ತಿಪರ ಸಿಬ್ಬಂದಿಗಳಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್, ‘ಪೊಲೀಸ್ ಇಲಾಖೆಗೆ ಪೌರರಕ್ಷಕರ ಸೇವೆ ಅಗತ್ಯವಾಗಿದೆ. ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿದಾಗ ಅವರ ಸಹಕಾರ ಅದ್ಭುತವಾಗಿತ್ತು. ಸ್ಥಳದಲ್ಲಿ ಕೆಲವೊಂದು ಮಹತ್ವದ ಸಾಕ್ಷ್ಯಗಳನ್ನು ಹುಡುಕಿಕೊಡುವ ಮೂಲಕ ಆರೋಪಿಗಳ ಪತ್ತೆಗೂ ಸಹಕರಿಸಿದ್ದರು’ ಎಂದರು.
ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ಟನಾಯಕ್, ಕೇಂದ್ರ ಗೃಹ ಸಚಿವಾಲಯದ ಐಜಿಪಿ ಸಂದೀಪ್ ರೈ ರಾಥೋರ್, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಸಿ.ಎಚ್.ಪ್ರತಾಪ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಕಾರ್ಯಾಗಾರದ ಎರಡನೇ ದಿನವಾದ ಶುಕ್ರವಾರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಜಮ್ಮು ಕಾಶ್ಮೀರ, ಮೇಘಾಲಯ ಮತ್ತು ಜಾರ್ಖಂಡ್‌ನ ಪೌರರಕ್ಷಣಾ ಇಲಾಖೆಯ ಅಧಿಕಾರಿಗಳ ಜತೆ ಸಂವಾದ ನಡೆಸಿ ಪೌರರಕ್ಷಣೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು’ ಎಂದು ಮುಖ್ಯ ವಾರ್ಡನ್ ಪಿ.ಆರ್.ಎಸ್.ಚೇತನ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.