ADVERTISEMENT

‘ರೈತರು ವಾಚ್‌ಮನ್‌ ಆಗುವ ಭಯ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2016, 19:30 IST
Last Updated 13 ಮಾರ್ಚ್ 2016, 19:30 IST
ವಿಚಾರ ಗೋಷ್ಠಿಯಲ್ಲಿ ಹಿ.ಶಿ. ರಾಮಚಂದ್ರೇಗೌಡ ಅವರು (ಎಡ)  ಸಿದ್ದನಗೌಡ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದರು. ನಂದಿನಿ ಜಯರಾಮ ಇದ್ದಾರೆ.
ವಿಚಾರ ಗೋಷ್ಠಿಯಲ್ಲಿ ಹಿ.ಶಿ. ರಾಮಚಂದ್ರೇಗೌಡ ಅವರು (ಎಡ)  ಸಿದ್ದನಗೌಡ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದರು. ನಂದಿನಿ ಜಯರಾಮ ಇದ್ದಾರೆ.   

ಬೆಂಗಳೂರು: ‘ಕೇಂದ್ರ ಸರ್ಕಾರವು ಕಾರ್ಪೊರೇಟ್‌್ ಕೃಷಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಅದರಿಂದ ಕೃಷಿ ಭೂಮಿ ಕಂಪೆನಿಗಳ ಪಾಲಾಗಲಿದೆ. ಪರಿಣಾಮ ರೈತರು ಕಂಪೆನಿಗಳಲ್ಲಿ ಕೂಲಿ ಹಾಗೂ ವಾಚ್‌ಮನ್‌ ಆಗಿ ಕೆಲಸ ಮಾಡಬೇಕಾಗುತ್ತದೆ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದರು.

‘ಪ್ರಥಮ ಸಂಕ್ರಮಣ ಸಾಹಿತ್ಯ ಸಮ್ಮೇಳನ’ದ ಕೊನೆ ದಿನವಾದ ಭಾನುವಾರ ‘ಕರ್ನಾಟಕದ ರೈತ ಚಳವಳಿಗಳು; ತಾಳಿಕೆ ಮಾರ್ಗಗಳು’ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾವುದೇ ಚಳವಳಿಯಾದರೂ ಕ್ರಿಯೆ ಮತ್ತು ಪ್ರತಿಕ್ರಿಯೆ ಮುಖ್ಯವೆನಿಸುತ್ತದೆ. ಅವುಗಳಿಂದ ಚಳವಳಿಗೆ ಶಕ್ತಿ ಬರುತ್ತದೆ. 1956ಕ್ಕಿಂತ ಮುಂಚೆ ನಡೆದ ಕಾಗೋಡು, ನಂಜನಗೂಡು ಸೇರಿದಂತೆ ಇತರೆ ಚಳವಳಿಗಳಲ್ಲಿ ಕ್ರಿಯೆ, ಪ್ರತಿಕ್ರಿಯೆ ಇತ್ತು’ ಎಂದ ಸಿದ್ದನಗೌಡ ಅವರು, ‘ಉಗ್ರವಾಗಿ, ಬಲವಾಗಿ, ತೀವ್ರವಾಗಿ ಖಂಡಿಸುತ್ತೇವೆ ಎನ್ನುವುದಕ್ಕಷ್ಟೇ ಇಂದಿನ ಚಳವಳಿಗಳು ಸೀಮಿತವಾಗುತ್ತಿವೆ’ ಎಂದು ಟೀಕಿಸಿದರು.

‘ಇಂದಿನ ರೈತ ಚಳವಳಿಗಳು ತತ್ವ ಕೇಂದ್ರಿತ ಬದಲು ವ್ಯಕ್ತಿ ಕೇಂದ್ರಿತವಾಗುತ್ತಿವೆ. ಸಾಹಿತ್ಯ ಮತ್ತು ಜನಪರ ಚಳವಳಿಗಳ ಅಂತರ್‌ ಸಂಬಂಧ ಕಳೆದು ಹೋಗುತ್ತಿದೆ. ಅದು ಚಳವಳಿಯ ಶಕ್ತಿಯನ್ನು ಕುಗ್ಗಿಸಿದೆ. ಇನ್ನಾದರೂ ಚಳವಳಿಗಾರರು ಅಂತರ್‌ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕು’ ಎಂದರು.

ಜನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ, ‘ದೇಶದಲ್ಲಿ ಬೀಜ ರಾಜಕೀಯವಿದೆ. ನಮ್ಮ ರೈತರ ಬೀಜಗಳು ಅಮೆರಿಕದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಂಗ್ರಹವಾಗಿವೆ’ ಎಂದು ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕೃಷಿ ಹಾಗೂ ರೈತರು ಉಳಿಯಬೇಕಾದರೆ ಗ್ರಾಮಗಳ ಪುನರ್‌್ ನಿರ್ಮಾಣವಾಗಬೇಕು. ಹೊಸ ದಾಸ್ತಾನು ವ್ಯವಸ್ಥೆ ರೂಪಿಸಬೇಕು. ರೈತ ಸಮೂಹದಲ್ಲಿ ಜಾರಿಯಲ್ಲಿರುವ ಅನಿಷ್ಟ ಪದ್ಧತಿಗಳನ್ನು ನಿವಾರಿಸಬೇಕು’ ಎಂದು ಸಲಹೆ ನೀಡಿದರು.

ರೈತ ಸಂಘದ ಕೆ.ಎಸ್‌. ನಂದಿನಿ ಜಯರಾಮ ಮಾತನಾಡಿ, ‘ರೈತ ಚಳವಳಿ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಉದಾಸೀನ ಹಾಗೂ ಉಡಾಫೆ ಮನೋಭಾವ ತಳೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದ ರೈತರು ಬಿತ್ತನೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜದಲ್ಲಿ ಖಾಸಗಿ ಕಂಪೆನಿಗಳು ಹಿಡಿತ ಸಾಧಿಸುತ್ತಿವೆ. ಅದರ ವಿರುದ್ಧ ಚಳವಳಿ  ನಡೆಯಬೇಕಿದೆ. ನಾವು ದೇಶೀಯ ಬಿತ್ತನೆ ಉಳುಮೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಸೃಷ್ಟಿಸಬೇಕು. ನೇಗಿಲು ಹಿಡಿದ ರೈತನೊಂದಿಗೆ ಲೇಖನಿ ಹಿಡಿದವರು ನಿಲ್ಲಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.