ADVERTISEMENT

‘ಲೋಕಪಾಲದಿಂದ ಭ್ರಷ್ಟರಿಗೆ ರಕ್ಷಣೆ’

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ವೆಂಕಟಾಚಲ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಬೆಂಗಳೂರು: ‘ಲೋಕಪಾಲ ಕಾಯ್ದೆಯು ಭ್ರಷ್ಟ ಅಧಿ­ಕಾರಿ­ಗಳನ್ನು  ಮತ್ತು ರಾಜಕಾರಣಿಗಳನ್ನು ರಕ್ಷಿ­ಸುವ ಕಾನೂನಾಗಿದೆ. ಇದರಿಂದ, ಜನಸಾಮಾನ್ಯರಿಗೆ ಮೂರು ಕಾಸಿನ ಪ್ರಯೋಜನವಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.­ವೆಂಕಟಾಚಲ ಅವರು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನ ವೇದಿಕೆಯು ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ 8 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಲೋಕಪಾಲ ಕಾನೂನಿನಲ್ಲಿ ಯಾರು ದೂರು ನೀಡು­ತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳ­ಬಹುದು ಎಂಬ ಅಂಶವಿದೆ. ಇದರಿಂದ, ಭ್ರಷ್ಟ ಅಧಿ­ಕಾರಿ­ಗಳು ನನಗೆ ಕೆಲಸ ಮಾಡಲು ತೊಂದರೆ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಸಿ ಕ್ರಮ ಕೈಗೊಳ್ಳಬಹುದು. ಇದರಿಂದ, ಜನರು ಯಾವುದೇ ಅಧಿಕಾರಿಯ ವಿರುದ್ಧ ದೂರು ಸಲ್ಲಿಸಿದರೆ, ಅವರಿಗೇ ಕಂಟಕಪ್ರಾಯವಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಪಾಲ ಕಾಯ್ದೆ ಅನುಷ್ಠಾನಕ್ಕೆ ತಾತ್ಕಾ­ಲಿಕ ತಡೆಯೊಡ್ಡಿದ್ದಾರೆ. ಮುಖ್ಯಮಂತ್ರಿ ಅವರು ಈ ಕಾನೂನಿನ ಕುರಿತು ಕೂಲಂಕಶವಾಗಿ ಪರಿಶೀಲಿ­ಸ­ಬೇಕು. ಈ ಕಾನೂನು ಜಾರಿಯಾದಲ್ಲಿ ಜನ­ಸಾಮಾನ್ಯರ ಹಕ್ಕು ಕಿತ್ತುಕೊಂಡಂತಾಗುತ್ತದೆ. ಆದ್ದರಿಂದ, ಲೋಕಪಾಲ ಕಾನೂನು ಜಾರಿಗೆ ತರಬಾರದು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ರಾಜಕಾರಣವು ಇಂದು ಸೇವೆಯಾಗದೆ, ವ್ಯಾಪಾರ­ವಾಗಿದೆ. ಪ್ರಜಾಪ್ರಭುತ್ವ ಸತ್ತ ಶವವಾಗಿದೆ. ಶವದ ಮುಂದೆ ಮಾಡುವ ಪ್ರತಿಭಟನೆ, ಹೋರಾಟ, ಗಂಟೆಯ ಸ್ವರ ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ವಿಷಾದಿಸಿದರು.

‘ಭ್ರಷ್ಟಾಚಾರ ನಿಯಂತ್ರಿಸಬೇಕಾದ ಸಾಂವಿಧಾನಿಕ ಸಂಸ್ಥೆ­ಗಳೇ ಇಂದು ಭ್ರಷ್ಟಾಚಾರದಲ್ಲಿ ತೊಡಗಿವೆ. ನ್ಯಾಯಾ­ಲಯಗಳ ಮೇಲೆ  ಜನರಿಗೆ ಕೊನೆಯ ವಿಶ್ವಾಸ­ವಿದೆ. ನ್ಯಾಯಾಲಯಗಳಾದರೂ ಜನರ ನಿರೀಕ್ಷೆ­ಗಳಿಗೆ ತಕ್ಕಂತೆ ನ್ಯಾಯವನ್ನು ಸಲ್ಲಿಸ­ಬೇಕಾ­ಗಿದೆ’ ಎಂದು ಹೇಳಿದರು.

‘ಅತಿ ಹೆಚ್ಚಿನ ರೀತಿಯಲ್ಲಿ ಯುವಕರು ಭ್ರಷ್ಟಾ­ಚಾರ ನಿರ್ಮೂಲನ ಹೋರಾಟದಲ್ಲಿ ಪಾಲ್ಗೊಳ್ಳ­ಬೇಕು. ಸ್ವಾತಂತ್ರ್ಯದ ಚಳವಳಿಯಂತೆ ಭ್ರಷ್ಟಾಚಾರ ನಿರ್ಮೂ­ಲನ ಚಳವಳಿ ನಡೆಯಬೇಕಾಗಿದೆ’ ಎಂದರು.

ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ ಮಾತನಾಡಿ, ‘ಅಧಿಕಾರದ ಸೂತ್ರವನ್ನು ಹಿಡಿದವರಿಂದಲೇ ಇಂದು ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ಇಲಾಖೆಗಳಿಗೂ ಭ್ರಷ್ಟಾಚಾರ ವ್ಯಾಪಕವಾಗಿ ವ್ಯಾಪಿಸಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.